ಸಿದ್ದರಾಮೋತ್ಸವ: ಕುರುಬ ಸಮಾಜದ ಶಕ್ತಿ ಧೃವೀಕರಣ

ರಾಜ್ಯ ಕಾಂಗ್ರೆಸ್‌ನ ಏಕೈಕ ಪ್ರಶ್ನಾತೀತ ನಾಯಕ ಸಿದ್ದರಾಮಯ್ಯ ಅವರು ಆಗಸ್ಟ್ 12ರಂದು 74 ತುಂಬಿ 75ನೇ ವರ್ಷಕ್ಕೆ ಕಾಲಿಡುತ್ತಾರೆ. ಈ ನೆಪದಲ್ಲಿ ಆಗಸ್ಟ್ 3ರಂದು ದಾವಣಗೆರೆಯಲ್ಲಿ ಹಮ್ಮಿಕೊಂಡಿರುವ ಸಿದ್ದರಾಮೋತ್ಸವ ಕಾರ್ಯಕ್ರಮ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ಸಿದ್ದರಾಮಯ್ಯನವರ ವ್ಯಕ್ತಿತ್ವವೇ ಅಂತಹುದು. ಒಬ್ಬ ರಾಜಕಾರಣಿಯಾಗಿ ಅವರಿಗೂ ವಿವಾದಗಳಿಗೂ ಸದಾ ಹತ್ತಿರದ ನಂಟು. ಮೈಸೂರು ಜಿಲ್ಲೆ ತಿ. ನರಸೀಪುರ ತಾಲೂಕಿನ ಸಿದ್ದರಾಮನಹುಂಡಿ ಎಂಬ ಕುಗ್ರಾಮದಲ್ಲಿ ಜನಿಸಿದ ದಿನಗಳಿಂದ ಹಿಡಿದು ಬಿಎಸ್‌ಸಿ ಎಲ್‌ಎಲ್‌ಬಿ ಮುಗಿಸಿ 1978ರಲ್ಲಿ ತರುಣ ವಕೀಲರಾಗಿ ಮೈಸೂರಿನ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲಿ ವೃತ್ತಿ ನಡೆಸುತ್ತಿದ್ದ ದಿನಗಳವರೆಗೆ ಅವರೊಬ್ಬ ಸಾಧಾರಣ ವ್ಯಕ್ತಿಯಾಗಿದ್ದರು. ಆದರೆ, ಅದ್ಭುತ ವಾಗ್ಮಿಯಾಗಿದ್ದ ಈ ಮನುಷ್ಯನಲ್ಲಿ ವಿಶೇಷತೆ ಇದೆ ಎಂಬುದನ್ನು ಮೊದಲು ಕಂಡುಕೊಂಡವರು ವಕೀಲಿ ವೃತ್ತಿಯಲ್ಲಿ ಅವರ ಸೀನಿಯರ್ ಆಗಿದ್ದ ನಂಜುಂಡಸ್ವಾಮಿ ಅವರು.

ರಾಜಕೀಯಕ್ಕೆ ಪದಾರ್ಪಣೆ

ನೀನು ಚುನಾವಣೆಗೆ ಸ್ಪರ್ಧಿಸು. ನಿನ್ನ ಸಹಜ ಪ್ರತಿಭೆ ಇರೋದು ರಾಜಕೀಯದಲ್ಲಿ ಎಂಬ ಅವರ ಪ್ರೋತ್ಸಾಹವೇ ಸಿದ್ದರಾಮಯ್ಯ ಅವರನ್ನು ಚುನಾವಣಾ ರಾಜಕೀಯಕ್ಕೆ ಕರೆತಂದಿತು. 1983ರಲ್ಲಿ ಆಗಿನ ಭಾರತೀಯ ಲೋಕದಳ ಪಕ್ಷದ ಟಿಕೆಟ್ ಪಡೆದು ಸ್ಪರ್ಧಿಸಿದ ಅವರು ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಮೊದಲ ಪ್ರಯತ್ನದಲ್ಲಿಯೇ ಗೆಲುವು ಸಾಧಿಸಿಬಿಟ್ಟರು. ಜನ ವಿರೋಧಿ ಅಲೆಯಿಂದಾಗಿ, ರಾಜ್ಯದಲ್ಲಿ ಮೊದಲ ಬಾರಿ ಕಾಂಗ್ರೆಸ್ಸೇತರ ಸರಕಾರ ಅಸ್ತಿತ್ವಕ್ಕೆ ಬಂದಿತ್ತು. ಗೆದ್ದ ನಂತರ ಜನತಾ ಪಕ್ಷ ಸೇರಿದ ಸಿದ್ದರಾಮಯ್ಯ ತಮ್ಮ ರಾಜಕೀಯ ಬದುಕನ್ನು ಬಲಪಡಿಸಿಕೊಂಡಿದ್ದು ಜನತಾ ಪರಿವಾರದಲ್ಲಿ. ಅಂದರೆ, ಆಗಿನ ಕಾಂಗ್ರೆಸ್ ಪಕ್ಷಕ್ಕೆ ವಿರುದ್ಧವಾಗಿ.

ಎರಡು ವರ್ಷಗಳ ಶಾಸಕತ್ವದ ಅವಧಿಯಲ್ಲಿ ಅವರು ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿ ಹಾಗೂ ನಂತರ ರೇಷ್ಮೆ ಸಚಿವರಾಗಿ ಕೆಲಸ ಮಾಡಿದರು. ಮೊದಲ ಪ್ರಯತ್ನದಲ್ಲಿಯೇ ಶಾಸಕರಾಗಿ ಸಚಿವರೂ ಆದ ಹೆಗ್ಗಳಿಕೆ ಸಿದ್ದರಾಮಯ್ಯನವರದು.
1985ರಲ್ಲಿ ಮಧ್ಯಂತರ ಚುನಾವಣೆ ನಡೆದಾಗ, ಸಿದ್ದರಾಮಯ್ಯ ಅದೇ ಚಾಮುಂಡೇಶ್ವರಿ ಕ್ಷೇತ್ರದಿಂದ ಪುನರಾಯ್ಕೆಯಾದರು. ಪಶು ಸಂಗೋಪನೆ ಸಚಿವರಾದ ಅವರು ನಂತರ ಸಾರಿಗೆ ಸಚಿವರಾಗಿಯೂ ಕಾರ್ಯನಿರ್ವಹಿಸಿದರು. ಜನತಾದಳದ ಪ್ರಧಾನ ಕಾರ್ಯದರ್ಶಿಯಾಗಿ ರಾಜ್ಯಾದ್ಯಂತ ವ್ಯಾಪಕವಾಗಿ ಪ್ರವಾಸ ಮಾಡಿದ ಅವರು ಪಕ್ಷವನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಹತ್ತೇ ವರ್ಷದಲ್ಲಿ ಉಪಮುಖ್ಯಮಂತ್ರಿ

1994ರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಆಯ್ಕೆಯಾದ ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾದರಲ್ಲದೇ ಹಣಕಾಸು ಮತ್ತು ಅಬಕಾರಿ ಖಾತೆಗಳನ್ನು ನಿರ್ವಹಿಸಿದರು. ತಮ್ಮ ಹೊಣೆಗಾರಿಕೆಯ ನಿರ್ವಹಣೆಯಲ್ಲಿ ಸಿದ್ದರಾಮಯ್ಯನವರು ಅದೆಂತಹ ದಕ್ಷ ವ್ಯಕ್ತಿ ಎಂದರೆ, ರಾಜ್ಯದ ಹಿಂದಿನ ಬಹುತೇಕ ಸಾಲವನ್ನು ತೀರಿಸಿದರಲ್ಲದೇ, ತಮ್ಮ ಅವಧಿಯಲ್ಲಿ ಮತ್ತೆಂದೂ ಓವರ್ ಡ್ರ್ಯಾಫ್ಟ್ ಪಡೆಯಲು ಹೋಗಲಿಲ್ಲ. ಅಷ್ಟೇ ಅಲ್ಲ, ಅವರ ಅವಧಿಯಲ್ಲಿ ಬೊಕ್ಕಸವೂ ಭರ್ತಿಯಾಯಿತು. ಸಂಪನ್ಮೂಲಗಳನ್ನು ಗುರುತಿಸಿ ಅವನ್ನು ಬಳಸಿಕೊಳ್ಳುವ ಅವರ ದೂರದೃಷ್ಟಿ ಮತ್ತು ಜಾಣ್ಮೆ ಅವರ ಭವಿಷ್ಯದ ರಾಜಕೀಯ ಜೀವನಕ್ಕೆ ದೊಡ್ಡ ಆಸರೆಯಾಯಿತು.

1999ರಿಂದ 2004ರವರೆಗೆ ಸಿದ್ದರಾಮಯ್ಯ ಅವರು ಜನತಾದಳದ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಇದರಿಂದ ರಾಜ್ಯದ ಮೂಲೆಮೂಲೆಯಲ್ಲಿರುವ ಸಮಸ್ಯೆಗಳು ಮತ್ತು ಶಕ್ತಿ ಅವರ ಗಮನಕ್ಕೆ ಬಂದವು. 2004ರ ಚುನಾವಣೆಯಲ್ಲಿ ಆಯ್ಕೆಯಾದ ಅವರು ಮತ್ತೊಮ್ಮೆ ಉಪಮುಖ್ಯಮಂತ್ರಿಯಾದ ಅವರು ಮತ್ತೊಮ್ಮೆ ಹಣಕಾಸು ಮತ್ತು ಅಬಕಾರಿ ಖಾತೆಗಳನ್ನು ನಿರ್ವಹಿಸಿದರು. ಕರ್ನಾಟಕ ರಾಜ್ಯ ಆರ್ಥಿಕ ಶಕ್ತಿಯಾಗುವಲ್ಲಿ ಅವರ ಸತತ ಎರಡು ಅವಧಿಯ ಕೊಡುಗೆ ಮಹತ್ವದ್ದೆನಿಸಿದವು.

ಅಹಿಂದ ವೇದಿಕೆ

ಅಷ್ಟೊತ್ತಿಗೆ ಕರ್ನಾಟಕ ರಾಜಕೀಯದಲ್ಲಿ ಪಲ್ಲಟಗಳು ಪ್ರಾರಂಭವಾಗಿದ್ದವು. ಲಿಂಗಾಯತ ಪ್ರಾಬಲ್ಯದ ನಂತರ ಒಕ್ಕಲಿಗರು ಪ್ರಬಲವಾಗುತ್ತಿರುವುದನ್ನು ಅತ್ಯಂತ ಸ್ಪಷ್ಟವಾಗಿ ಕಂಡುಕೊಂಡಿದ್ದರು ಸಿದ್ದರಾಮಯ್ಯ. ಆದರೆ, ರಾಜ್ಯದ ಬಹುಸಂಖ್ಯಾತರು ಅಧಿಕಾರದಿಂದ ಈಗಲೂ ದೂರವೇ ಇರುವುದನ್ನು ಗಮನಿಸಿದ್ದ ಸಿದ್ದರಾಮಯ್ಯ, ಮುಂದುವರಿದ ಕೋಮುಗಳಿಗೆ ಪರ್ಯಾಯವಾಗಿ ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ) ಶಕ್ತಿಯನ್ನು ಬೆಳೆಸಲು ಮುಂದಾದರು.

ಅಹಿಂದಕ್ಕೆ ರಾಜಕೀಯೇತರ ರೂಪ ಕೊಟ್ಟ ಸಿದ್ದರಾಮಯ್ಯನವರು, ತಮ್ಮ ಭವಿಷ್ಯದ ರಾಜಕೀಯವನ್ನು ಗಟ್ಟಿಗೊಳಿಸಲು ರಾಜ್ಯಾದ್ಯಂತ ರ‍್ಯಾಲಿಗಳು ಹಾಗೂ ಸಮ್ಮೇಳನಗಳನ್ನು ನಡೆಸಲು ಪ್ರಾರಂಭಿಸಿದರು. ಭವಿಷ್ಯದ ರಾಜಕೀಯ ಅವಕಾಶ ಇರುವುದೇ ಅಹಿಂದ ವರ್ಗಕ್ಕೆ ಎಂಬುದನ್ನು ಮನಗಂಡಿದ್ದ ಅವರು, ಅಹಿಂದ ಬಲಪಡಿಸುವ ಮೂಲಕ ರಾಜಕೀಯದಲ್ಲಿ ತಮ್ಮ ಹಿಡಿತವನ್ನು ಬಲಪಡಿಸಲು ಮುಂದಾದರು.

ಕಾಂಗ್ರೆಸ್‌ಗೆ ಸೇರ್ಪಡೆ

ಒಕ್ಕಲಿಗರನ್ನು ರಾಜಕೀಯ ಶಕ್ತಿಯಾಗಿ ಬೆಳೆಸುವ ಮೂಲಕ ರಾಜ್ಯ ರಾಜಕೀಯವನ್ನು ತಮ್ಮ ಹಿಡಿತಕ್ಕೆ ತಂದುಕೊಳ್ಳಲು ಪ್ರಯತ್ನಿಸುತ್ತಿದ್ದ ಎಚ್.ಡಿ. ದೇವೆಗೌಡ ಅವರಿಗೆ ಅಹಿಂದ ದೊಡ್ಡ ಸವಾಲಾಗಿ ಪರಿಣಮಿಸಿತು. ಪರಿಣಾಮವಾಗಿ ಸಿದ್ದರಾಮಯ್ಯ ಅವರಿಗೆ ಕಿರುಕುಳ ಪ್ರಾರಂಭವಾಯಿತು. ಸಿದ್ದರಾಮಯ್ಯನವರ ಏಳಿಗೆಯನ್ನು ಸಹಿಸದೇ ದೇವೆಗೌಡರು ಅವರನ್ನು ಪಕ್ಷದಿಂದ ಉಚ್ಛಾಟಿಸಿದರು. ಈ ಸಾಧ್ಯತೆಯನ್ನು ಊಹಿಸಿಯೇ ಅಹಿಂದ ಕಟ್ಟಿದ್ದ ಸಿದ್ದರಾಮಯ್ಯ ಕೆಲ ಕಾಲ ಎಬಿಪಿಜೆಡಿ ಎಂಬ ಸಂಘಟನೆ ನಡೆಸಿದರಾದರೂ, ಅದೇ ವರ್ಷ ಕಾಂಗ್ರೆಸ್ ಸೇರುವ ಮೂಲಕ ಜನತಾ ಪರಿವಾರದ ನಂಟು ಕಡಿದುಕೊಂಡರು. ಇದು ಅವರ ರಾಜಕೀಯ ಜೀವನದ ಮಹತ್ವದ ತಿರುವು.

ಕಾಂಗ್ರೆಸ್ ಸೇರ್ಪಡೆ ನಂತರ, ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಸಿದ್ದರಾಮಯ್ಯ, ನಂತರ ನಡೆದ ಉಪಚುನಾವಣೆಯಲ್ಲಿ ಅದೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿದರು. 2008ರ ವಿಧಾನಸಭಾ ಚುನಾವಣೆಯ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಅವರು ಕ್ಷೇತ್ರ ಪುರ್ನವಿಂಗಡಣೆಯಿಂದ ಉದ್ಭವಿಸಿದ್ದ ವರುಣಾ ಕ್ಷೇತ್ರದಿಂದ ಗೆಲುವು ಪಡೆದಿದ್ದಲ್ಲದೇ ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನಗಳನ್ನು ಗಳಿಸುವಲ್ಲಿಯೂ ಯಶಸ್ವಿಯಾದರು.

ಮೂವತ್ತು ವರ್ಷದಲ್ಲಿ ಮುಖ್ಯಮಂತ್ರಿ

ಆಪರೇಶನ್ ಕಮಲದ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿಯ ಮೊದಲ ಸರಕಾರದ ಅವಧಿಯಲ್ಲಿ ಅವರು ಪ್ರತಿಪಕ್ಷದ ನಾಯಕನಾಗಿ ಸಕ್ರಿಯವಾಗಿ ಕೆಲಸ ಮಾಡಿದರು. ಮುಂದೆ 2013ರ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದಲೇ ಗೆದ್ದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಮೂಲಕ ಅಹಿಂದ ಸ್ಥಾಪನೆಯ ಉದ್ದೇಶವನ್ನು ಈಡೇರಿಸಿಕೊಂಡರು.

ಬಡ ಕುಟುಂಬದ ಗ್ರಾಮೀಣ ಪ್ರತಿಭೆ ಸಿದ್ದರಾಮಯ್ಯ ಇಂತಹ ಸತತ ಹೋರಾಟದ ಮೂಲಕವೇ ರಾಜ್ಯದ ಮುಖ್ಯಮಂತ್ರಿಯಾದರು. ಕಾಂಗ್ರೆಸ್ ಪಕ್ಷದ ಬಹುದೊಡ್ಡ ಶಕ್ತಿಯಾದರು. ಪ್ರಬಲ ಕೋಮುಗಳಾದ ಲಿಂಗಾಯತ ಮತ್ತು ಒಕ್ಕಲಿಗರಿಗೆ ಪರ್ಯಾಯವಾಗಿ ಅಹಿಂದ ಕಟ್ಟಿದರು. ನಂತರ, ಕುರುಬ ಸಮಾಜದ ಅಸ್ಮಿತೆಯನ್ನು ಸ್ಪಷ್ಟವಾಗಿಸಿ, ಇತರ ಪ್ರಬಲ ಕೋಮುಗಳ ಜೊತೆಗೆ ಕುರುಬ ಸಮಾಜವೂ ಪ್ರಬಲ ಕೋಮು ಎಂದು ಗುರುತಿಸಲ್ಪಡುವಂತೆ ಮಾಡಿದರು.

ಕುರುಬ ಅಸ್ಮಿತೆ

ದಕ್ಷ ಆಡಳಿತ ಕೊಟ್ಟಿದ್ದರೂ, ಸಿದ್ದರಾಮಯ್ಯ ಅವರಿಗೆ 2018ರ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು ಸಾಧ್ಯವಾಗಲಿಲ್ಲ. ಮೈತ್ರಿ ಮೂಲಕ ಅಧಿಕಾರಕ್ಕೆ ಬಂದರೂ, ಕಾಂಗ್ರೆಸ್‌ಗೆ ತನ್ನ ಅಸ್ಮಿತೆ ಕಾಪಾಡಿಕೊಳ್ಳಲು ಸಾಧ್ಯವಾಗಲಿಲ್ಲ.

ಈ ಮಧ್ಯೆ ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯ ರಾಜಕೀಯ ಸಾಕಷ್ಟು ಬದಲಾಗಿದೆ. ನೆಲೆಯೂರಿಯೇ ಬಿಟ್ಟಿತು ಎಂದು ಭಾವಿಸಲಾಗಿದ್ದ ಬಿಜೆಪಿ ತಡವರಿಸತೊಡಗಿದೆ. ಇನ್ನೊಂದೆಡೆ, ಕಾಂಗ್ರೆಸ್‌ನಲ್ಲಿ ಹೊಸ ಹುರುಪು ಕಾಣಿಸಿಕೊಂಡಿದೆ. ಜೊತೆಗೆ ಹೊಸ ಆಕಾಂಕ್ಷೆಗಳು ಕೂಡಾ. ಒಕ್ಕಲಿಗರ ಅಸ್ಮಿತೆ ಮುಂದಿಟ್ಟುಕೊಂಡು ಡಿ.ಕೆ. ಶಿವಕುಮಾರ್ ಹಾಗೂ ಕುರುಬ ಸಮಾಜದ (ಈಗ ಅಹಿಂದ ಇಲ್ಲ) ಅಸ್ಮಿತೆಯನ್ನು ಜೊತೆಗಿಟ್ಟುಕೊಂಡು ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ತಮ್ಮ ಹಿಡಿತ ಬಲಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಭವಿಷ್ಯದ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಮತ್ತೆ ಬಿಂಬಿತವಾಗುತ್ತಿರುವುದನ್ನು ಸಹಿಸಿಕೊಳ್ಳುವುದು ಡಿ.ಕೆ. ಶಿವಕುಮಾರ್ ಅವರಿಗೆ ಇಷ್ಟವಿಲ್ಲ. ಆ ಹುದ್ದೆಗೆ ತಾವೇ ಬರಬೇಕೆಂಬುದು ಅವರ ಸಹಜ ಆಸೆ. ಆದರೆ, ರಾಜಕೀಯ ಅನುಭವ ಮತ್ತು ಕೊಡುಗೆಯಲ್ಲಿ ಸಾಕಷ್ಟು ಮುಂದಿರುವ ಸಿದ್ದರಾಮಯ್ಯ, ಇದೊಂದು ಅವಧಿ ತಮಗೇ ಇರಲಿ ಎಂದು ಪ್ರಯತ್ನಿಸುತ್ತಿದ್ದಾರೆ. ಅದು ಕುರುಬ ಅಸ್ಮಿತೆಯ ಮುಂದುವರಿದ ಭಾಗವೂ ಹೌದು.

ಇಂತಹ ಸಂದರ್ಭದಲ್ಲಿ ಸಿದ್ದರಾಮಯ್ಯನವರ 75ನೇ ಜನ್ಮದಿನ ಬಂದಿದೆ. ಅದನ್ನು ಸಿದ್ದರಾಮೋತ್ಸವವಾಗಿಸುವ ಮೂಲಕ ತಮ್ಮ ಪ್ರಾಬಲ್ಯವನ್ನು ಕಾಂಗ್ರೆಸ್ ಹೈಕಮಾಂಡ್‌ಗೆ ಮನದಟ್ಟು ಮಾಡಿಸಲು ಕುರುಬ ಸಮಾಜ ಪಣ ತೊಟ್ಟಿದೆ. ಪಕ್ಷದೊಳಗಿನ ಈ ಪ್ರಬಲ ಪೈಪೋಟಿ ಕಾಂಗ್ರೆಸ್‌ಗೆ ವರವಾಗುತ್ತಾ ಅಥವಾ ಮುಳುವಾಗುತ್ತಾ ಎಂಬುದನ್ನು ಬರಲಿರುವ ದಿನಗಳು ನಿರ್ಧರಿಸಲಿವೆ.

– ಚಾಮರಾಜ ಸವಡಿ | ಕೊಪ್ಪಳ

(ಪತ್ರಿಕೆಯೊಂದಕ್ಕೆ ಬರೆದ ಲೇಖನ)

Leave a Reply

Your email address will not be published. Required fields are marked *

error: Content is protected !!