ಜಿಬಿ ನ್ಯೂಸ್ ಕನ್ನಡ ಸುದ್ದಿ ಗಂಗಾವತಿ: ಬಿಜೆಪಿಯ ಜನವಿರೋಧಿ ನೀತಿಗಳನ್ನ ಮತ್ತು ಬೆಲೆ ಏರಿಕೆಯಂತಹ ಜನಸಾಮಾನ್ಯರ ಸಂಕಷ್ಟದ ಸಂದರ್ಭದಲ್ಲಿ ಬೀದಿಗಿಳಿದು ಪ್ರತಿಭಟಿಸದ ಕಾಂಗ್ರೆಸ್ ಈಗ ತಮ್ಮ ನಾಯಕರಿಗೆ ಸಂಕಷ್ಟ ಬಂದಿದೆ ಎಂಬ ಕಾರಣಕ್ಕೆ ಬೀದಿಗಿಳಿದು ಪ್ರತಿಭಟಿಸುವುದನ್ನು ನೋಡಿದರೆ ಕಾಂಗ್ರೆಸ್ ಯಾರ ಪರವಾಗಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಜನಸಾಮಾನ್ಯರು ಕಾಂಗ್ರೆಸ್ನ ಈ ಮನೋಧೋರಣೆ ಮತ್ತು ಕಾರ್ಯವೈಖರಿಯನ್ನು ನಿಷ್ಠರವಾಗಿ ಖಂಡಿಸುತ್ತಿದೆ. ಅಲ್ಲದೆ ಹೈಕಮಾಂಡ್ ಅನ್ನು ಮೆಚ್ಚಿಸುವ ಸಲುವಾಗಿ ಬೀದಿಗಿಳಿಯಲು ಸಿದ್ದರಾಗಿರುವ ಕಾಂಗ್ರೆಸ್ ಮುಖಂಡರು ಒಮ್ಮೆಯಾದರೂ ಜನಸಾಮಾನ್ಯರ ಕಷ್ಟ ಗಳಿಗಾಗಿ ಏಕೆ ಬೀದಿಗೆ ಇಳಿಯಲಿಲ್ಲ ಎಂದು ಪ್ರತಿಯೊಬ್ಬ ಜನಸಾಮಾನ್ಯನು ಅರಿತು ಕೊಂಡಿದ್ದಾನೆ. ಜನರ ಸಂಕಷ್ಟಗಳಿಗೆ ಎಂದಿಗೂ ಸ್ಪಂದಿಸದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರು ಈಗ ತಮ್ಮ ಬೆಂಬಲಿಗರಿಗೆ ಕರೆ ನೀಡಿ ಆಕಾಶ ತಲೆ ಮೇಲೆ ಕಳಚಿ ಬಿದ್ದಂತೆ ಭಾವಿಸಿ ಬೀದಿಗೆ ಇಳಿದು ಪ್ರತಿಭಟಿಸಲು ಕರೆ ನೀಡಿದ್ದನ್ನು ಗಮನಿಸಿದರೆ ಅದರ ಒಳ ಮರ್ಮ ಏನು ಎಂದು ಜನರು ಚೆನ್ನಾಗಿ ಅರಿತುಕೊಂಡಿದ್ದಾರೆ. ತಮ್ಮ ಸಂಕಷ್ಟಕ್ಕೆ ಈ ರೀತಿಯಲ್ಲಿ ಎಂದಿಗೂ ಸ್ಪಂದಿಸದ ಕಾಂಗ್ರೆಸ್ ಮುಖಂಡರ ವಿರುದ್ಧ ಜನ ಮುಂದಿನ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆಮ್ ಆದ್ಮಿ- ಪಕ್ಷದ ಶರಣಪ್ಪ ಸಜ್ಜಿಹೊಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.