ಖಾಸಗಿ ವಾಹನಗಳ ನೋಂದಣಿ ಸಂಖ್ಯೆಯ ಫಲಕಗಳಲ್ಲಿ ನಿಯಮಬಾಹಿರವಾಗಿ ಹಾಕಿರುವ ಸಂಘ-ಸಂಸ್ಥೆಯ ಹೆಸರು, ಚಿಹ್ನೆ, ಸರಕಾರದ ಲಾಂಛನವನ್ನು ತೆರವುಗೊಳಿಸಲು ಸಾರಿಗೆ ಇಲಾಖೆಯು 10 ದಿನಗಳ ಗಡವು ನೀಡಿದೆ.

ಸರಕಾರಿ ಸ್ವಾಮ್ಯದ ಸಂಸ್ಥೆಗಳು, ನಿಗಮ ಮಂಡಳಿಗಳು ಹಾಗೂ ಸ್ವಂತ ವಾಹನಗಳ ಮೇಲೆ ಅನಧಿಕೃತವಾಗಿ ಸರಕಾರದ ಲಾಂಧನ, ರಾಜ್ಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಹೆಸರುಗಳನ್ನು ಬರೆಸಿರುವ ನೋಂದಣಿ ಫಲಕಗಳನ್ನು ತೆರವುಗೊಳಿಸಲು ಜನವರಿಯಲ್ಲಿ ಹೈಕೋರ್ಟ ಆದೇಶಿಸಿದೆ. ಈ ರೀತಿಯ ಫಲಕಗಳನ್ನು ತೆರವುಗೊಳಿಸದಿದ್ದರೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುವುದು ಎಂದು ಎಲ್ಲ ನಿಗಮ ಮಂಡಳಿಗಳು, ಸಂಸ್ಥೆಗಳಿಗೆ ಸರಕಾರ ಎಚ್ಚರಿಕೆ ನೀಡಿತ್ತು.
“ಖಾಸಗಿ ವಾಹನಗಳ ಮಾಲೀಕರು ಸ್ವಯಂಪ್ರೇರಿತವಾಗಿ ಸಂಘ-ಸಂಸ್ಥೆ ಹೆಸರು, ಚಿಹ್ನೆ, ಸರಕಾರದ ಲಾಂಛನ ಅಳವಡಿಸಿರುವ ನಂಬರ ಪ್ಲೇಟ್ಗಳನ್ನು ತೆರವುಗೊಳಿಸಬೇಕು. ಇಲ್ಲವಾದಲ್ಲಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಇಂತಹ ವಾಹನಗಳು ಕಂಡು ಬಂದರೆ ಸಾರ್ವಜನಿಕರು ಕೂಡ ಫೋಟೋ ಸಹಿತ 9449864032 ವಾಟ್ಸಪ್ ಸಂಖ್ಯೆಗೆ ಕಳುಹಿಸಿ ದೂರು ನೀಡಬಹುದು,” ಎಂದು ಉಪ ಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿರುತ್ತಾರೆ.