ಕಾವಿ, ಕಾಮ, ಕಲ್ಮಠ ಮತ್ತು ಕಳ್ಳಾಟ

ಈ ಶೀರ್ಷಿಕೆ ಮತ್ತು ಇದಕ್ಕೆ ಸಂಬಂಧಿಸಿದ ವಿಷಯಗಳನ್ನು ಬರೆಯುವುದು ಬೇಡ ಅಂದುಕೊಂಡಿದ್ದೆ.

ಏಕೆಂದರೆ, ಧಾರ್ಮಿಕ ಸಂಸ್ಥೆಗಳು ಮತ್ತು ಅವುಗಳ ಮುಖ್ಯಸ್ಥರ ʼಆಟʼಗಳನ್ನು ಅತಿ ಹತ್ತಿರದಿಂದ ನೋಡಿದವ ನಾನು. ವೈರಾಗ್ಯವೊಂದನ್ನು ಬಿಟ್ಟು ಎಲ್ಲವನ್ನೂ ಅಲ್ಲಿ ನೋಡಿದ್ದೇನೆ.

ಮೊದಲ ಸಲ ಆಗ ಆಘಾತವೆನಿಸಿತ್ತು. ನಂತರ ಜುಗುಪ್ಸೆ ಬಂದಿತ್ತು. ಈಗ ನಿರ್ಲಿಪ್ತನಾಗಿರುವುದನ್ನು ಕಲಿತಿದ್ದೇನೆ. ಬಹುತೇಕ ಎಲ್ಲಾ ಧಾರ್ಮಿಕ ಸಂಸ್ಥೆಗಳು ಮತ್ತು ಅವುಗಳ ಮುಖ್ಯಸ್ಥರಿಂದ ನಾನು ಅಂತರ ಕಾಯ್ದುಕೊಂಡು ಬಂದಿರುವುದಕ್ಕೆ ಇದೇ ಮುಖ್ಯ ಕಾರಣ.

ಈ ವಿಷಯ ಪ್ರಸ್ತಾಪವಾಗುವುದಕ್ಕೆ ಕಾರಣ ಕೊಪ್ಪಳ ಜಿಲ್ಲೆ ಗಂಗಾವತಿ ನಗರದಲ್ಲಿರುವ ಕಲ್ಮಠದ ಕೊಟ್ಟೂರು ಸ್ವಾಮೀಜಿಗೆ ಸಂಬಂಧಿಸಿದಂತೆ ಇತ್ತೀಚೆಗೆ ದಾಖಲಾಗಿರುವ ಎಫ್ಐಆರ್.

ಬಹುತೇಕ ಎಲ್ಲಾ ಪತ್ರಿಕೆಗಳು, ವೆಬ್ ಪೋರ್ಟಲ್‌ಗಳು ಮತ್ತು ಸುದ್ದಿವಾಹಿನಿಗಳಲ್ಲಿ ಪ್ರಸಾರ/ಪ್ರಕಟವಾದ ಮಾಹಿತಿಯನ್ನೇ ಇಲ್ಲಿ ಮತ್ತೆ ಹಾಕುವುದಾದರೆ-

ʼಶಾಲೆಯ ಅಡುಗೆ ಕೆಲಸದ ವಿಚಾರವಾಗಿ ನಡೆದ ಗಲಾಟೆಯಲ್ಲಿ ಗಂಗಾವತಿಯ ಕಲ್ಮಠದ ಕೊಟ್ಟೂರು ಸ್ವಾಮೀಜಿ ಅವರು, ಮಹಿಳೆಯೋರ್ವಳಿಗೆ ಸೂಳೆಗಾರಿಕೆ ಮಾಡಲು ಹೋಗು ಎಂದು ಬೈದಿದ್ದಲ್ಲದೇ ಕೊಲೆ ಬೆದರಿಕೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಕಲ್ಮಠದ ಕೊಟ್ಟೂರು ಸ್ವಾಮೀಜಿ ಹಾಗೂ ಮಠದ ಆಡಳಿತದಲ್ಲಿ ಬಿಗಿ ಹಿಡಿತ ಹೊಂದಿರುವ ಬಸಲಿಂಗಮ್ಮ ಎಂಬುವರ ವಿರುದ್ಧ ಗಂಗಾವತಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ʼಗಂಗಾವತಿ ನಿವಾಸಿ ಕಮಲಾಕ್ಷಿ ಅಲಿಯಾಸ್ ನಿರ್ಮಲಾ ಎನ್ನುವವರು ದೂರು ದಾಖಲಿಸಿದ್ದಾರೆ. ಅವರೇ ಹೇಳಿಕೊಂಡಿರುವ ಪ್ರಕಾರ, ಕೊಟ್ಟೂರೇಶ್ವರ ಕಾಲೇಜಿನಲ್ಲಿ ಅವರು ಅಡುಗೆ ಕೆಲಸ ಮಾಡುತ್ತಿದ್ದಾರೆ. ಆದರೆ ಬಸಲಿಂಗಮ್ಮ ಎಂಬ ಮಹಿಳೆ, ಅಡುಗೆ ಮಾಡುವುದಕ್ಕೆ ಹೋಗಿದ್ದ ಕಮಲಾಕ್ಷಿಗೆ ನೀನ್ಯಾಕೆ ಇಲ್ಲಿ ಬಂದಿದ್ದೀಯಾ ಎಂದು ಗಲಾಟೆ ಮಾಡಿದ್ದಾರೆ. ಸ್ವಾಮೀಜಿ ಬಳಿ ಪಿಸ್ತೂಲ್ ಇದೆ. ನಿನ್ನನ್ನು ಕೊಲೆ ಮಾಡಿಸುತ್ತೇನೆಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಕಮಲಾಕ್ಷಿ ದಾಖಲಿಸಿದ್ದಾರೆ.

ʼಅಲ್ಲದೆ ಕೊಟ್ಟೂರ ಸ್ವಾಮೀಜಿ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದೂ ಕಮಲಾಕ್ಷಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ʼಈ ಹಿನ್ನೆಲೆಯಲ್ಲಿ, ಕೊಟ್ಟೂರ ಸ್ವಾಮೀಜಿ ಹಾಗೂ ಬಸಲಿಂಗಮ್ಮ ವಿರುದ್ದ ಗಂಗಾವತಿ ನಗರ ಠಾಣೆಯಲ್ಲಿ ಕಲಂ 323, 324, 504 ಹಾಗೂ 506 ಅಡಿ ದೂರು ದಾಖಲಾಗಿದೆ.

ʼಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಗಂಗಾವತಿಯ ಕಲ್ಮಠದ ಕೊಟ್ಟೂರು ಸ್ವಾಮೀಜಿ 2017 ರಲ್ಲಿ ರಾಜ್ಯಾದ್ಯಂತ ಸುದ್ದಿಯಾಗಿದ್ದರು. ಈಗ ಮತ್ತೆ ಅಡುಗೆ ಮಾಡುವ ಮಹಿಳೆಯೊಂದಿಗೆ ಜಗಳಕ್ಕೆ ಬಿದ್ದು ಪ್ರಕರಣ ದಾಖಲಾಗಲು ಕಾರಣರಾಗಿದ್ದಾರೆʼ.

ಬಹುತೇಕ ಮಾಧ್ಯಮಗಳ ವರದಿ ಈ ಅಂಶಗಳನ್ನು ಒಳಗೊಂಡಿದೆ.

ಇದನ್ನು ನೋಡಿದ, ಓದಿದ ನನಗೆ 2003ರಲ್ಲಿ ಮೊದಲ ಬಾರಿ ಕಲ್ಮಠದ ಕೊಟ್ಟೂರು ಸ್ವಾಮೀಜಿಗೆ ಸಂಬಂಧಿಸಿದ ಲೈಂಗಿಕ ಹಗರಣದ ವರದಿಗಾರಿಕೆ ಮಾಡಿದ್ದು ನೆನಪಾಯಿತು.

*****

ನಾನಾಗ ʼಪರ್ಯಾಯʼ ಹೆಸರಿನ ವಾರಪತ್ರಿಕೆಯೊಂದನ್ನು ಕೊಪ್ಪಳದಿಂದ ಹೊರತರುತ್ತಿದ್ದೆ. ಆ ಪತ್ರಿಕೆಯಲ್ಲಿ ʼಕಲ್ಮಠದಲ್ಲಿ ಬಳೆಗಳ ಸಪ್ಪಳʼ ಎಂಬ ಶೀರ್ಷಿಕೆಯಲ್ಲಿ ಮೂರು ಸರಣಿ ವರದಿಗಳನ್ನು ಪ್ರಕಟಿಸಿದ್ದೆ.

ಇವತ್ತು ಎಫ್ಐಆರ್‌ನಲ್ಲಿ ಹೆಸರಿಸಲ್ಪಟ್ಟಿರುವ ಸ್ವಾಮೀಜಿ ಮತ್ತವರ ತಂಡದ ಮಹಿಳೆಯಲ್ಲದೇ, ಇತರ ಪಾತ್ರಧಾರಿಗಳ ಕೃತ್ಯಗಳ ಕುರಿತ ಸಾಕಷ್ಟು ವಿವರಗಳು ಅದರಲ್ಲಿ ಪ್ರಕಟವಾಗಿದ್ದವು.

ಮೊದಲ ಸಲ ಇಂತಹದೊಂದು ವರದಿ ಓದಿದ ಸಾಕಷ್ಟು ಜನ ಆಘಾತಗೊಂಡಿದ್ದರು. ಕಾವಿ ಕಂಡ ಕೂಡಲೇ ಕಾಲು ಬೀಳುವ ಮನಃಸ್ಥಿತಿಯ ಜನರಿಗಂತೂ ನನ್ನ ವರದಿ ಅಕ್ಷರಶಃ ಸಿಡಿಲಿನಂತೆ ಎರಗಿತ್ತು.

ಮೊದಲನೆಯ ಕಂತು ಪ್ರಕಟವಾದಾಗ ಆಕ್ಷೇಪ ವ್ಯಕ್ತಪಡಿಸಿದ್ದವರು ಎರಡು ಮತ್ತು ಮೂರನೇ ಕಂತು ಬಂದ ನಂತರ ನಿತ್ರಾಣರಾಗಿದ್ದರು. ಅವರಲ್ಲಿ ಪ್ರತಿಭಟಿಸಲು ಕಾರಣಗಳೇ ಉಳಿದಿರಲಿಲ್ಲ.

ಹತ್ತೊಂಬತ್ತು ವರ್ಷಗಳ ನಂತರವೂ ಅವತ್ತಿನ ಪರಿಸ್ಥಿತಿ ಈಗಲೂ ಹಾಗೇ ಮುಂದುವರಿದಿದೆ ಎಂಬುದನ್ನು ಇತ್ತೀಚಿನ ಎಫ್ಐಆರ್ ಬಿಂಬಿಸಿದೆ. ಅಷ್ಟೇ ಅಲ್ಲ, ಎಫ್‌ಐಆರ್‌ನಲ್ಲಿ ಇಲ್ಲದ ಬಹುತೇಕ ಮಹತ್ವದ ಅಂಶಗಳು ಗಂಗಾವತಿಯ ಬಹುತೇಕ ನಾಗರಿಕರಿಗೆ ಗೊತ್ತಿವೆ. ಸದರಿ ಪ್ರಕರಣದ ಹಿನ್ನೆಲೆ ಏನು ಎಂಬುದು ಸಹ ಈಗ ಗುಟ್ಟಿನ ವಿಷಯವಾಗಿ ಉಳಿದಿಲ್ಲ.

*****

ಕಲ್ಮಠ ಹಾಗೂ ಕೊಟ್ಟೂರು ಸ್ವಾಮಿಗಳಿಗೆ ಸಂಬಂಧಿಸಿದ ಸಾಕಷ್ಟು ವಿಷಯಗಳು ನನಗೆ ವೈಯಕ್ತಿಕವಾಗಿ ಗೊತ್ತು. ಹಾಗೆ ಗೊತ್ತಿರುವುದರಿಂದಲೇ, ಅವುಗಳನ್ನು ವರದಿ ಮಾಡಲು ನಾನು ಮನಸ್ಸು ಮಾಡಿಲ್ಲ. ಮೊದಲೇ ಸ್ಪಷ್ಟಪಡಿಸಿದಂತೆ, ಧಾರ್ಮಿಕ ಸಂಸ್ಥೆಗಳು ಮತ್ತು ಅವುಗಳ ಮುಖ್ಯಸ್ಥರ ಕುರಿತಂತೆ ನಾನು ತಟಸ್ಥ ನಿಲುವನ್ನು ಅಳವಡಿಸಿಕೊಂಡಿದ್ದೇನೆ.

ಈ ಹಿನ್ನೆಲೆಯಲ್ಲಿ ಗಂಗಾವತಿ ಕಲ್ಮಠದ ಕೊಟ್ಟೂರು ಸ್ವಾಮೀಜಿ, ಅವರನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಬೆಂಬಲಿಸುತ್ತಿರುವ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಸಂಸದ ಶಿವರಾಮೇಗೌಡ, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮುಂತಾದವರಿಗೆ ಒಂದು ಕಿವಿಮಾತು ಹೇಳಬಯಸುತ್ತೇನೆ.

ಮಠ ಅಥವಾ ಧಾರ್ಮಿಕ ಸಂಸ್ಥೆಗಳು ಸಮಾಜಕ್ಕೆ ಸೇರಿದವುಗಳು. ಸಾರ್ವಜನಿಕರ ನಂಬಿಕೆಯನ್ನು, ಶ್ರದ್ಧೆಯನ್ನು ಹಾಗೂ ನೆರವನ್ನು ಹೊಂದಿರುವಂಥವು. ಮಠಾಧೀಶರಾಗಲಿ, ಮುಖ್ಯಸ್ಥರಾಗಲಿ ಆ ನಂಬಿಕೆಯನ್ನು ಮುಂದುವರಿಸುವ ಒಂದು ಮಹತ್ವದ ಕೊಂಡಿಯಾಗಿರುತ್ತಾರೆಯೇ ಹೊರತು ಅದು ಪಿತ್ರಾರ್ಜಿತ ಆಸ್ತಿಯಲ್ಲ.

ಹೀಗಾಗಿ ಧಾರ್ಮಿಕ ಸಂಸ್ಥೆಗಳ ಮುಖ್ಯಸ್ಥರ ಮೇಲೆ ಹೆಚ್ಚಿನ ಹೊಣೆಗಾರಿಕೆ ಇರುತ್ತದೆ. ಇತರ ಎಲ್ಲರಿಗಿಂತ ಹೆಚ್ಚಿನ ಸಾಮಾಜಿಕ ಮತ್ತು ನೈತಿಕ ಜವಾಬ್ದಾರಿ ಇರುತ್ತದೆ. ಜನರ ಶ್ರದ್ಧೆ ದುರ್ಬಲಗೊಳಿಸುವ ಯಾವ ಕೆಲಸವನ್ನೂ ಅವರು ಮಾಡಬಾರದು. ಅದು ಜನರ ಸಹಜ ನಿರೀಕ್ಷೆ ಕೂಡಾ.

ಆದರೆ, ಗಂಗಾವತಿ ಕಲ್ಮಠದ ಕೊಟ್ಟೂರು ಸ್ವಾಮೀಜಿ ಜನರ ಅಂತಹ ಶ್ರದ್ಧೆ ಮತ್ತು ನಂಬಿಕೆಯನ್ನು ಪದೇ ಪದೇ ಕದಡಿದ್ದಾರೆ. ಒಬ್ಬ ಲೌಕಿಕ ವ್ಯಕ್ತಿ ಕೂಡಾ ಮಾಡಲು ಹಿಂಜರಿಯುವಂತಹ ನಡವಳಿಕೆಯನ್ನು ತೋರುತ್ತಾ ಬಂದಿದ್ದಾರೆ.

ವ್ಯಕ್ತಿಯೊಬ್ಬ ಒಮ್ಮೆ ಮಾಡುವ ತಪ್ಪನ್ನು ಆಕಸ್ಮಿಕವೆನ್ನಬಹುದು. ಅಂಥದೇ ತಪ್ಪುಗಳನ್ನು ಪದೇ ಪದೇ ಮಾಡಿದಾಗ, ಅದನ್ನು ಸ್ವಭಾವ ಎನ್ನಬೇಕಾಗುತ್ತದೆ. ಮಠಾಧೀಶನೊಬ್ಬ ಅಂತಹ ಸ್ವಭಾವ ಹೊಂದಿದ್ದರೆ ಸಮಾಜದ ಹಿರಿಯರು ಅದನ್ನು ತಿದ್ದಲು ಪ್ರಯತ್ನಿಸಬೇಕು. ಅದು ಬಿಟ್ಟು ಬಹಿರಂಗ ಬೆಂಬಲಕ್ಕೆ ಇಳಿದರೆ, ಕೃತ್ಯದಲ್ಲಿ ಅವರದೂ ಪಾಲಿರಬಹುದು ಎಂಬ ಶಂಕೆ ಮೂಡುತ್ತದೆ.

ಗಂಗಾವತಿಯ ಕಲ್ಮಠ ಸ್ವಾಮೀಜಿ ಪ್ರಕರಣದಲ್ಲಿ ಈಗ ನಡೆಯುತ್ತಿರುವುದು ಇದೇ. ತಮ್ಮ ಕೃತ್ಯಗಳ ಬಗ್ಗೆ ಕೊಟ್ಟೂರು ಸ್ವಾಮೀಜಿಗೆ ಪಶ್ಚಾತ್ತಾಪವಿಲ್ಲ. ನೀವು ಮಾಡಿದ್ದು ಮತ್ತು ಮಾಡುತ್ತಿರುವುದು ತಪ್ಪು ಎಂದು ಹೇಳುವ ಹೊಣೆಗಾರಿಕೆ ಮೇಲೆ ಕಾಣಿಸಿರುವ ನಾಯಕರಿಗೆ ಇಲ್ಲ. ಇದೇ ನಿಜವಾದ ದುರಂತ.

2017 ರ ಪ್ರಕರಣದಲ್ಲಿಯೂ ಇಂಥದೇ ಧೋರಣೆ ವ್ಯಕ್ತವಾಗಿತ್ತು. ಹಗರಣದ ವರದಿ ಮಾಡಿದ್ದ ಮಾಧ್ಯಮಗಳು ಹಾಗೂ ಮಾಧ್ಯಮದ ವರದಿಯನ್ನು ಹಂಚಿಕೊಂಡಿದ್ದ ಸಾರ್ವಜನಿಕ ವ್ಯಕ್ತಿಗಳ ವಿರುದ್ಧ ದೂರುಗಳು ದಾಖಲಾಗಿದ್ದವು. ವಿನಾಕಾರಣ ಕೆಲವರಿಗೆ ಕಿರುಕುಳ ನೀಡಲಾಯಿತು. ಕೆಲವು ಪ್ರಕರಣಗಳು ಈಗಲೂ ವಿಚಾರಣೆಯ ವಿವಿಧ ಹಂತಗಳಲ್ಲಿವೆ. ʼತಪ್ಪು ಮಾಡುವುದು ತಪ್ಪಲ್ಲ, ಅದನ್ನು ಪ್ರಶ್ನಿಸುವುದು ತಪ್ಪುʼ ಎಂಬ ಧೋರಣೆಯೇ ಇಂತಹ ಪರಿಸ್ಥಿತಿಗೆ ಕಾರಣ.

ಐದು ವರ್ಷಗಳ ನಂತರ, ಆ ದಿನಗಳು ಮತ್ತೆ ಮರುಕಳಿಸುವ ಲಕ್ಷಣಗಳು ಕಾಣಿಸಿಕೊಂಡಿವೆ.

ಪ್ರಶ್ನಿಸುವವರನ್ನೇ ಶಿಕ್ಷಿಸುವ ವ್ಯವಸ್ಥೆ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂಬುದನ್ನು ಇವರೆಲ್ಲ ಅರ್ಥ ಮಾಡಿಕೊಳ್ಳಬೇಕು. ಅಷ್ಟೇ ಅಲ್ಲ, ಕಲ್ಮಠ ಸ್ವಾಮೀಜಿ ಇನ್ನಾದರೂ ಸಾತ್ವಿಕ ರೀತಿಯಲ್ಲಿ ಯೋಚಿಸಲಿ, ನಡೆದುಕೊಳ್ಳಲಿ. ತಮ್ಮ ನಡವಳಿಕೆಯನ್ನು ವರದಿ ಮಾಡಿದವರು ಹಾಗೂ ಅಂತಹ ವರದಿಗಳನ್ನು ಹಂಚಿಕೊಂಡಿರುವವರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯಲಿ. ಜನಪರವಾದ ಕೆಲಸಗಳನ್ನು ಮಾಡುವ ಮೂಲಕ ಕಲ್ಮಠವನ್ನು ಮತ್ತೆ ಅಭಿವೃದ್ಧಿಯ ದಾರಿಗೆ ಕೊಂಡೊಯ್ಯಲಿ. ಜನರ ನಂಬಿಕೆ ದೊಡ್ಡದು. ಅದೇ ನಿಜವಾದ ಬಂಡವಾಳ. ಅದನ್ನು ಮತ್ತೆ ಗಳಿಸುವಂತಹ ಕೆಲಸಗಳನ್ನು ಮಾಡಲಿ ಎಂದು ಆಶಿಸುತ್ತೇನೆ.

ಇಲ್ಲದಿದ್ದರೆ, ಇಂತಹ ಹಗರಣಗಳೇ ಮುಂದೆ ಹಗ್ಗವಾಗುತ್ತವೆ; ಜನರ ಧಾರ್ಮಿಕ ಶ್ರದ್ಧೆ ನೇಣಿಗೆ ಬೀಳುತ್ತದೆ. ಅಂತಹ ಪರಿಸ್ಥಿತಿಯೇನಾದರೂ ಬಂದರೆ, ಅದು ಕಲ್ಮಠಕ್ಕಷ್ಟೇ ಅಲ್ಲ, ಇಡೀ ಸಮಾಜಕ್ಕೇ ಅಪಾಯ ತರುವಂತಹ ಬೆಳವಣಿಗೆಯಾಗುತ್ತದೆ.

ಹಾಗಾಗದಿರಲಿ!

ಚಾಮರಾಜ ಸವಡಿ | ಕೊಪ್ಪಳ

#

Leave a Reply

Your email address will not be published. Required fields are marked *

error: Content is protected !!