ಇತ್ತೀಚೆಗೆ ಭಗತ್ ಸಿಂಗ್ ಪಾಠವನ್ನು ಕೈಬಿಡಲಾಗಿದೆ ಎಂದು ಮಾಧ್ಯಮಗಳಲ್ಲಿ ದೊಡ್ಡ ಹುಯಿಲೆಬ್ಬಿಸಲಾಯಿತು. ವಿದ್ಯಾರ್ಥಿ ಸಂಘಟನೆಗಳು ಎಂದು ಹೇಳಿಕೊಂಡವರು ಬೀದಿಗಿಳಿದು ಹೋರಾಟ ಮಾಡಿ ಘೋಷಣೆ ಕೂಗಿದರು. ಭಗತ್ ಸಿಂಗ್ ಪಾಠವನ್ನು ಕೈಬಿಡುವುದನ್ನು ಯಾವ ಕಾರಣಕ್ಕೂ ಸಹಿಸಲಾಗುವುದಿಲ್ಲ ಎಂದು ಠರಾವು ಮಂಡಿಸಲಾಯಿತು.
ಅಸಲಿ ವಿಷಯವೇನೆಂದರೆ,
ನಾವು ಭಗತ್ ಸಿಂಗ್ ಪಾಠವನ್ನು ಕೈಬಿಟ್ಟಿರಲಿಲ್ಲ. ಜೊತೆಗೆ ಅದಕ್ಕೆ ಪೂರಕವಾಗುವಂಥ ಇನ್ನೊಂದು ಪಾಠವನ್ನೂ ಸೇರಿಸಿದ್ದೆವು. ಅದರಲ್ಲಿ ಭಗತ್ ಸಿಂಗ್ ಜೊತೆಗೆ ಸುಖದೇವ್, ರಾಜಗುರು, ಚಂದ್ರಶೇಖರ್ ಆಜಾದ್ ಮುಂತಾದ ಹಲವು ಕ್ರಾಂತಿಕಾರಿ ಯೋಧರ ಪರಿಚಯ ಮಾಡಿಕೊಟ್ಟಿದ್ದೆವು.
ಇರಲಿ, ವಿಷಯ ಅದಲ್ಲ.
ಈ ವಿದ್ಯಾರ್ಥಿ ಸಂಘಟನೆಗಳು ʼಭಗತ್ ಸಿಂಗ್ ಪಾಠ ಕೈಬಿಡುವುದನ್ನು ಸಹಿಸುವುದೇ ಇಲ್ಲʼ ಎಂದು ಕೂಗಿದವಲ್ಲ? ಆ ಪಾಠವನ್ನು ಬರಗೂರು ಸೇರಿಸಿದ್ದು ೨೦೧೭ರಲ್ಲಿ. ಸೇರಿಸಿದ್ದು ಸ್ವಾಗತಾರ್ಹವೇ. ಆದರೆ ಅದಕ್ಕಾಗಿ ಬಲಿಕೊಟ್ಟ ಪಾಠ ಯಾವುದು ಗೊತ್ತೆ? ʼಉದಾತ್ತ ಚಿಂತನೆಗಳುʼ ಎಂಬ ಶೀರ್ಷಿಕೆ ಇದ್ದ ಪಾಠ. ಅದರಲ್ಲಿದ್ದುದು ಮೂವರು ಮಹನೀಯರ ಚಿಂತನೆಗಳು. ಒಬ್ಬರು ಸ್ವಾಮಿ ವಿವೇಕಾನಂದರಾದರೆ ಇನ್ನೊಬ್ಬರು ಮಹಾತ್ಮಾ ಗಾಂಧಿ. ಮೂರನೆಯ ವ್ಯಕ್ತಿ ಡಾ. ಬಾಬಾಸಾಹೇಬ್ ಅಂಬೇಡ್ಕರ್! ಈ ಮೂವರೂ ಮಹನೀಯರ ಚಿಂತನೆಗಳಿಗೆ ಕತ್ತರಿಪ್ರಯೋಗ ಮಾಡಿ, ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಪೂರ್ತಿ ಎಬಡ ಸಿದ್ಧಾಂತವನ್ನು ಹಾಕಿ ಬರಗೂರು ಸಮಿತಿ ಎಲ್ಲವನ್ನೂ ಹಾಳುಮಾಡಿತ್ತು. ಹಾಗೆಯೇ ಕನ್ನಡದ ಶ್ರೇಷ್ಠ ಕಥನಕವನಕಾರರಾದ ಸು.ರಂ. ಎಕ್ಕುಂಡಿಯವರ ʼಪಾರಿವಾಳʼ ಎಂಬ ಅತ್ಯುತ್ತಮ ಕಥನಕವನವನ್ನು ಕಿತ್ತುಹಾಕಿ ಅಲ್ಲಿ ಒಂದು ನೀರಸ ಸಂಗ್ರಹಾನುವಾದವನ್ನು (ಅದನ್ನು ಸಮಿತಿಯೇ ಮಾಡಿ, ಲಂಕೇಶರ ಹೆಸರು ಹಾಕಿತ್ತು) ಹಾಕುವ ಉದ್ದೇಶವಾದರೂ ಏನಿತ್ತೋ!
ಈಗಿನ ಪಠ್ಯದಲ್ಲಿ ಭಗತ್ ಸಿಂಗ್ ಪಾಠ ಇದೆ, ಇದೆ ಮಾತ್ರವಲ್ಲ – ಸಮಗ್ರವಾಗಿದೆ. ಜೊತೆಗೆ ಉದಾತ್ತ ಚಿಂತನೆಗಳ ಪಾಠವೂ ಇದೆ. ಬರಗೂರು ಸಮಿತಿ ಕಿತ್ತುಹಾಕಿದ್ದ ಅಂಬೇಡ್ಕರರನ್ನು ಈ ಸಮಿತಿ ಉಳಿಸಿಕೊಂಡಿದೆ. ಜೊತೆಗೆ ವಿವೇಕಾನಂದರ ಚಿಂತನೆಯ ಹೆಸರಿನಲ್ಲಿ ಹರಿದುಬಂದಿದ್ದ ʼಬುದ್ಧಿಜೀವಿʼ ಚಿಂತನೆಗೆ ಬ್ರೇಕ್ ಹಾಕಲಾಗಿದೆ. ವಿವೇಕಾನಂದರ ಚಿಂತನೆಗಳನ್ನು ಅವರದೇ ಭಾಷೆಯಲ್ಲಿ ಕೊಟ್ಟಿದ್ದೇವೆ. ಇಷ್ಟಾದರೂ ಈ ಸಮಿತಿಯು ಪಕ್ಷನಿಷ್ಠ, ಸಂಘಟನನಿಷ್ಠ, ಬ್ರಾಹ್ಮಣಶಾಹಿ!