ಸರ್ಕಾರದ ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ ಯೋಜನೆಗಳನ್ನು ನಿರ್ದಿಷ್ಟ ಫಲಾನುಭವಿಗಳಿಗೆ ತಲುಪುವ ಹಾಗೇ ಎಲ್ಲಾ ಅಧಿಕಾರಿಗಳು ಸಾಮಾಜಿಕ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ವಿಕಾಸ್ ಕೀಶೋರ್ ಸುರಳ್ಕರ್ ಹೇಳಿದರು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಬೆಂಗಳೂರು ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ ಕೋಶದ ಸಹಯೊಗದಲ್ಲಿ “ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ ಅಧಿನಿಯಮ 2013 ಮತ್ತು ನಿಯಮಗಳು 2017’’ರ ಅನುಷ್ಠಾನದ ಕುರಿತು ಜಿಲ್ಲಾ ಮತ್ತು ತಾಲ್ಲೂಕ ಮಟ್ಟದ ಅಧಿಕಾರಿಗಳಿಗೆ ಗುರುವಾರಂದು (ಏ.07) ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ದಲಿತರಿಗೆ ದೇವಸ್ಥಾನ ಪ್ರವೇಶ ನಿರಾಕರಣೆ ಮಾಡುವಂತಹ ವಿಷಯ ಶೋಚನೀಯ ವಿಚಾರವಾಗಿದೆ. ಇನ್ನೂ ಕೆಲವು ಹೋಟೆಲ್, ಕ್ಷೌರದಂಗಡಿಗಳಲ್ಲಿ ದಲಿತರಿಗೆ ಪ್ರವೇಶ ಇಲ್ಲದಿರುವುದು ಬೆಳಕಿಗೆ ಬಂದಿದೆ. ಆದ್ದರಿಂದ ಅಧಿಕಾರಿಗಳು ದಲಿತರನ್ನು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸಬಲರಾಗಿಸಲು ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ ಯೋಜನೆಗಳಲ್ಲಿ ಇರುವ ಎಲ್ಲಾ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಕಾರ್ಯನಿರ್ವಹಿಸಬೇಕು. ಸರ್ಕಾರ ನೀಡುವ ನಿರ್ದಿಷ್ಟ ಗುರಿಯನ್ನು ಮಾತ್ರ ಮುಟ್ಟುವುದು ಅಧಿಕಾರಿಗಳ ಯೋಚನೆಯಾಗಬಾರದು. ಅದರ ಜೊತೆಗೆ ಅಧಿಕಾರಿಗಳು ಪ್ರಾಮಾಣಿಕವಾಗಿ ತಮ್ಮ ಕರ್ತವ್ಯಗಳನ್ನು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಅರಿತು ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕು. ಅಂದಾಗ ಮಾತ್ರ ಮಹಾತ್ಮ ಗಾಂಧಿಜಿಯವರ ಗ್ರಾಮೀಣಭಿವೃದ್ಧಿ ಕನಸು ನನಸಾಗುತ್ತದೆ ಎಂದರು. ಬೆಂಗಳೂರು ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ ಕೋಶದ ಅಧಿಕಾರಿ ಉರ್ಮಿಳಾ ಅವರು ಮಾತನಾಡಿ, ರಾಜ್ಯದಲ್ಲಿ ಎಸ್ಸಿಪಿಟಿಎಸ್ಪಿ ಕಾಯ್ದೆಗೆ ಎಸ್.ಸಿ ಮತ್ತು ಎಸ್.ಟಿ ಜನಸಂಖ್ಯೆಗೆ ಅನುಗುಣವಾಗಿ ಅನುದಾನವನ್ನು ಹಂಚಿಕೆ ಮಾಡಿದೆ. ಇಡೀ ದೇಶದಲ್ಲಿಯೇ ಕರ್ನಾಟಕ ಎಸ್ಸಿಪಿ-ಟಿಎಸ್ಪಿ ಅನುದಾನ ಬಳಕೆಯಲ್ಲಿ 2ನೇ ಸ್ಥಾನದಲ್ಲಿದೆ. ಈ ಯೋಜನೆಯ ಅನುದಾನವನ್ನು ಉದ್ದೇಶಪೂರ್ವಕವಾಗಿ ಬಳಸದೇ ಇದ್ದಲ್ಲಿ, ಅಂತಹವರ ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳಲಾಗುತ್ತದೆ. ಎಸ್ಸಿಪಿ-ಟಿಎಸ್ಪಿ ಅನುದಾನವನ್ನು ವೈಯಕ್ತಿಕ ಅಭಿವೃದ್ಧಿಗೆ, ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ, ಶಿಕ್ಷಣ, ಆರೋಗ್ಯ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿಗೆ, ಕಾರ್ಮಿಕ, ದೈಹಿಕ ವಿಕಲಚೇತನರಿಗೆ ಹಾಗೂ ಎಸ್ಸಿ ಮತ್ತು ಎಸ್ಟಿ ಸಂಬಂಧಿಸಿದ ಕಾಮಗಾರಿಗಳಿಗೆ ಹಂಚಿಕೆ ಮಾಡಲಾಗುತ್ತದೆ ಎಂದರು. ಕಾಯ್ದೆಯ ಅನುಷ್ಠಾನದ ಮೇಲ್ವಿಚಾರಣಾ ವ್ಯವಸ್ಥೆಯನ್ನು ರಾಜ್ಯ ಅಭಿವೃದ್ಧಿ ಪರಿಷತ್, ನೋಡಲ್ ಏಜೆನ್ಸಿ, ಜಿಲ್ಲಾ ಮೇಲ್ವಿಚಾರಣೆ ಸಮಿತಿ ಮತ್ತು ತಾಲ್ಲೂಕು ಮೇಲ್ವಿಚಾರಣೆ ಸಮಿತಿಗಳಾಗಿ ವಿಂಗಡಿಲಾಗಿದೆ. ರಾಜ್ಯದ ಪ್ರತಿ ಜಿಲ್ಲೆಗೆ ಮೂರು ತಿಂಗಳಿಗೊಮ್ಮೆ ಎಸ್ಸಿಪಿ-ಟಿಎಸ್ಪಿ ಅನುದಾನ ಬಿಡುಗಡೆ ಮಾಡಲಾಗುವುದು. ಈ ಯೋಜನೆಯ ಕೆಲಸ-ಕಾರ್ಯಗಳ ವಿವರವನ್ನು ವೆಬ್‍ಸೈಟ್‍ನಲ್ಲಿ ಸಾರ್ವಜನಿಕರು ನೋಡುವ ಹಾಗೇ ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕು. ಅರ್ಹ ಫಲಾನುಭವಿಗೆ ಯೋಜನೆಯ ಲಾಭ ತಲುಪಿರುವ ಬಗ್ಗೆ ಪರಿಶೀಲನೆ ಮಾಡಬೇಕು. ಎಸ್ಸಿಪಿ-ಟಿಎಸ್ಪಿ ಅನುದಾನವನ್ನು ಬೇರೆ ಯಾವುದೇ ಕಾಮಗಾರಿಗೆ ವರ್ಗಾವಣೆ ಮಾಡುವಂತಿಲ್ಲ. ಎಸ್ಸಿಪಿ-ಟಿಎಸ್ಪಿ ಕಾಮಗಾರಿಗಳಲ್ಲಿ ಗುಣಮಟ್ಟವನ್ನು ಥರ್ಡ್ ಪಾರ್ಟಿ ನೋಡಿದ ಮೇಲೆ ಬಿಲ್ ಮಾಡಬೇಕು. ಕಾಮಗಾರಿಗಳ ಪುನರಾವರ್ತನೆಯನ್ನುಮಾಡಬಾರದು. ಎಸ್ಸಿಪಿ-ಟಿಎಸ್ಪಿ ಗೆ 2013-14 ರಲ್ಲಿ 8,616.14 ಕೋಟಿ ಹಣ ಹಂಚಿಕೆಯಾಗಿದೆ. ಪ್ರಸ್ತುತ ಸಾಲಿನಲ್ಲಿ 28,234.32 ಕೋಟಿ ಹಣ ಹಂಚಿಕೆಯಾಗಿದೆ ಎಂದು ಎಸ್ಸಿಪಿ-ಟಿಎಸ್ಪಿ ಕಾಯ್ದೆಯ ಸಮಗ್ರ ಮಾಹಿತಿಯನ್ನು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ವಿವರವಾಗಿ ಹೇಳಿದರು. ಬೆಂಗಳೂರು ನೋಡಲ್ ಅಧಿಕಾರಿ ವೆಂಕಟಯ್ಯ ಅವರು ಮಾತನಾಡಿ, ಎಸ್ಸಿಪಿಟಿಎಸ್ಪಿ ಯೋಜನೆಗೆ ಸಂಬಂಧಪಟ್ಟ ಅನುದಾನವನ್ನು ಜಿಲ್ಲಾ ಮಟ್ಟ ಇಲಾಖೆಗಳು ಹೇಗೆ ಬಳಕೆ ಮಾಡುತ್ತಿವೆ ಎಂದು ಅಧಿಕಾರಿಗಳೊಂದಿಗೆ ಕೃಷಿ, ಹೈನುಗಾರಿಕೆ, ಅಂಬೇಡ್ಕರ್ ವಸತಿ ಯೋಜನೆ, ಬಸ್ ಪಾಸ್, ಜಲಧಾರ, ಜಲಜೀವನ ಮಿಷನ್, ನಮ್ಮ ರಸ್ತೆ ನಮ್ಮ ಗ್ರಾಮ, ವಿವಿಧ ವಿಷಯಗಳ ಬಗ್ಗೆ ಸಂವಾದ ಮಾಡಿ, ಇಲಾಖೆಗಳ ಯೋಜನೆ ಅನುಷ್ಠಾನದಲ್ಲಿ ಆಗುತ್ತಿರುವ ಸಮಸ್ಯೆಗಳ ಮಾಹಿತಿಯನ್ನು ಪಡೆದುಕೊಂಡರು. ಕಾರ್ಯಗಾರದಲ್ಲಿ ಬೆಂಗಳೂರು ಡಾ. ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಸುರೇಶ್ ಕುಮಾರ್, ಕೊಪ್ಪಳ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಿ.ಫೌಜಿಯಾ ತರನ್ನುಮ್, ಅಪರ ಜಿಲ್ಲಾಧಿಕಾರಿ ಎಂ.ಪಿ ಮಾರುತಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನವೀನ್ ಶಿಂತ್ರೆ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕ ಮಟ್ಟದ ಅಧಿಕಾರಿಗಳು, ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.