1962ರಲ್ಲಿ ನಡೆದ ಭಾರತ-ಚೀನಾ ಯುದ್ಧ ದೇಶದ ಇತಿಹಾಸ ದಲ್ಲೊಂದು ಕರಾಳ ಅಧ್ಯಾಯ. ಆ ಘನಘೋರ ಕಾಳಗದಲ್ಲಿ ಭಾರತ ನೆರೆಯ ಚೀನಾ ವಿರುದ್ಧ ಹೀನಾಯವಾಗಿ ಸೋತು ಶರಣಾಗಿತ್ತು. ಅದು ಕೇವಲ ಸೈನ್ಯದ ಸೋಲಾಗಿರಲಿಲ್ಲ. ದಿಲ್ಲಿಯ ದೊರೆಗಳ ಮಹಾ ಪರಾಜಯವಾಗಿತ್ತು. ಪ್ರಧಾನಿ ಜವಾಹರಲಾಲ್ ನೆಹರೂರವರ ಅಬದ್ಧ ರಾಷ್ಟ್ರೀಯ ನೀತಿ ಮತ್ತು ರಕ್ಷಣಾ ಮಂತ್ರಿ ಕೃಷ್ಣ ಮೆನನ್‌ರವರ ಬೇಜವಾಬ್ದಾರಿತನದ ಪರಿಣಾಮವಾಗಿ ಭಾರತೀಯ ಸೈನಿಕರು ಸಾವಿರಾರು ಅಡಿ ಎತ್ತರದ ಹಿಮಪರ್ವತಗಳ ಮೇಲೆ ಸರಿಯಾದ ಮದ್ದು-ಗುಂಡುಗಳೂ ಇಲ್ಲದೆ ಬರಿಗೈಯಲ್ಲಿ ಬಡಿದಾಡಿ ಪ್ರಾಣತ್ಯಾಗ ಮಾಡಿದ್ದರು. ಅದೊಂದು ದಾರುಣ ಕಥನ. ಆ ಸೋಲಿನ ಅನಂತರ ಇಡೀ ಭಾರತೀಯ ಸೈನ್ಯ ಮಾನಸಿಕವಾಗಿ ಕುಗ್ಗಿಹೋಗಿತ್ತು. ದೇಶ ತನ್ನ ನಾಯಕರ ಮೇಲಿನ ವಿಶ್ವಾಸವನ್ನು ಸಂಪೂರ್ಣವಾಗಿ ಕಳೆದು ಕೊಂಡಿತ್ತು. ಒಟ್ಟಾರೆ ಈ ದೇಶದ ಕತೆ ಮುಗಿದೇ ಹೋಯಿತು ಎನ್ನುವಂತಾಗಿತ್ತು. ಆ ಪರಿಸ್ಥಿತಿಯಲ್ಲಿ ಶತ್ರುರಾಷ್ಟ್ರ ಪಾಕೀಸ್ತಾನ ತನಗೆ ಬೇಕಾದ ತಯಾರಿ ಮಾಡಿಕೊಳ್ಳುತ್ತಿತ್ತು. ಸದ್ದಿಲ್ಲದೆ ಭಾರತದ ಮೇಲೆ ಯುದ್ಧವೊಂದಕ್ಕೆ ಸಜ್ಜಾಗುತ್ತಿತ್ತು. ನ್ಯಾಟೋ ಸದಸ್ಯತ್ವವನ್ನು ಪಡೆದು ಕೊಂಡು ಅಮೆರಿಕಾದೊಂದಿಗೆ ಅನೇಕ ಮಿಲಿಟರಿ ಒಪ್ಪಂದಗಳನ್ನು ಮಾಡಿಕೊಂಡಿತು. ಭಯಾನಕ ಯುದ್ಧ ಶಸ್ತ್ರಾಸ್ತ್ರಗಳನ್ನು ಖರೀದಿಸಿತು. ಪರಿಣಾಮ ಆತ್ಯಾಧುನಿಕ ಪ್ಯಾಟನ್ ಟ್ಯಾಂಕ್‌ಗಳು, ಸಾಬರ್ ಜೆಟ್‌ಗಳು ಮತ್ತು ಎಫ್-86 ಯುದ್ಧ ವಿಮಾನಗಳು ಪಾಕೀಸ್ತಾನಕ್ಕೆ ಬಂದಿಳಿದವು. ಅದರಲ್ಲೂ ಪ್ಯಾಟನ್ ಟ್ಯಾಂಕ್‌ಗಳು ಆಗಷ್ಟೇ ತಯಾರಾಗಿದ್ದವು. ಅವು ಎರಡು ಕಿಲೋಮೀಟರ್ ದೂರದ ಟಾರ್ಗೆಟ್‌ಗಳನ್ನು ಉಡಾಯಿಸಬಲ್ಲ ಸಾಮರ್ಥ್ಯ ಹೊಂದಿದ್ದವು. ಅವುಗಳ ನೈಟ್ ವಿಷನ್ ಅದ್ಭುತವಾಗಿತ್ತು. ಟ್ಯಾಂಕ್‌ಗಳಲ್ಲಿ ಕುಳಿತ ಸೈನಿಕ ಅದರಿಂದ ಹೊರಗೆ ಬರದ ಒಳಗಿ ನಿಂದಲೇ ಶತ್ರುಗಳೆಡೆಗೆ ಶೆಲ್‌ಗಳ ಸುರಿಮಳೆಗೈಯವ ಶಕ್ತಿ ಅವುಗಳಿಗಿತ್ತು. ಆದರೆ, ಭಾರತದ ಬಳಿ ಇದ್ದದ್ದು ಸೆಂಚುರಿಯನ್ ಟ್ಯಾಂಕ್‌ಗಳು. 1942ರ ಎರಡನೇ ಮಹಾಯುದ್ಧದ ಸಮಯದಲ್ಲಿ ಬ್ರಿಟನ್ ತಯಾರು ಮಾಡಿದ್ದ ಹಾಳೆಯ ಟ್ಯಾಂಕ್‌ಗಳು, ಅವುಗಳಿಗೆ ಕೇವಲ 800 ಮೀಟರ್ ದೂರದ ಟಾರ್ಗೆಟ್‌ಗಳನ್ನು ಮಾತ್ರ ಉಡಾಯಿಸಬಲ್ಲ ಸಾಮರ್ಥ್ಯ. ಒಟ್ಟಾರೆ ತನ್ನದೇ ಆಂತರಿಕ ಸಮಸ್ಯೆಗಳಿಂದ ನಲುಗಿಹೋಗಿದ್ದ ಭಾರತಕ್ಕೆ ಶತ್ರುರಾಷ್ಟ್ರ ತನ್ನ ಮೇಲೆರಗಲು ಸಿದ್ಧವಾಗುತ್ತಿದೆ ಎನ್ನುವುದು ತಿಳಿಯಲಿಲ್ಲ.

1965ರಲ್ಲಿ ಅದೊಂದು ದಿನ ಇದ್ದಕ್ಕಿದ್ದಂತೆ ಪಾಕೀಸ್ತಾನಿ ಸೈನಿಕರು ಮತ್ತು ಉಗ್ರಗಾಮಿಗಳು ಜಮ್ಮು-ಕಾಶ್ಮೀರದ ಗಡಿಯೊಳಗೆ ನುಗ್ಗಿ ಮೇಲಿಂದ ಮೇಲೆ ಆಕ್ರಮಣಕ್ಕೆ ಮುಂದಾಗಿದ್ದರು. ಆ ಸಮಯದಲ್ಲಿ ಭಾರತದ ಪ್ರಧಾನ ಮಂತ್ರಿಯಾಗಿದ್ದವರು ಲಾಲ್ ಬಹದ್ದೂರ್ ಶಾಸ್ತ್ರಿ, ಪಾಕೀಸ್ತಾನದ ಆಕ್ರಮಣಕ್ಕೆ ಶಾಸ್ತ್ರೀಜಿ ಎದೆಗುಂದಲಿಲ್ಲ. ಶತ್ರುಗಳನ್ನು ಹಿಮ್ಮೆಟ್ಟಿಸಲು ಮತ್ತು ಪ್ರತಿದಾಳಿ ನಡೆಸಲು ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟುಬಿಟ್ಟರು. ಚೀನಾ ವಿರುದ್ಧದ ಯುದ್ಧದಲ್ಲಿ ಸೋತಂತೆ ಭಾರತ ಈ ಬಾರಿಯೂ ಸೋಲು ಅನುಭವಿಸುತ್ತದೆ ಎಂದೇ ಪಾಕೀಸ್ತಾನ ಭಾವಿಸಿತ್ತು. ಆದರೆ ಶಾಸ್ತ್ರೀಜಿಯವರ ದಿಟ್ಟ ನಿರ್ಧಾರ ಮತ್ತು ಸೈನ್ಯಕ್ಕೆ ನೀಡಿದ ಪರಮಾಧಿಕಾರದ ಪರಿಣಾಮ ಭಾರತ ಪಾಕೀಸ್ತಾನವನ್ನು ಬಗ್ಗು ಬಡಿದಿತ್ತು. ಯುದ್ಧದಲ್ಲಿ ಭಾರತ ಜಯಭೇರಿ ಬಾರಿಸಿತ್ತು. ಭಾರತೀಯ ಸೈನ್ಯ ಲಾಹೋರ್‌ನ ಹೆಬ್ಬಾಗಿಲಿಗೆ ಬಂದು ನಿಂತಿತ್ತು. ಮುಂದಿನ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನದ ಪ್ರಮುಖ ನಗರಗಳು ಭಾರತದ ಕೈವಶವಾಗುವುದರಲ್ಲಿತ್ತು. ಅಷ್ಟರಲ್ಲಿ ಪಾಕಿಸ್ತಾನ ಲಜ್ಜೆಬಿಟ್ಟು ಅಮೆರಿಕಾ, ರಷ್ಯಾ ಮತ್ತು ವಿಶ್ವಸಂಸ್ಥೆಯ ಮುಂದೆ ಮಂಡಿಯೂರಿ ಕುಳಿತು ಯುದ್ಧ ನಿಲ್ಲಿಸಲು ಭಾರತಕ್ಕೆ ಸೂಚಿಸುವಂತೆ ಗೋಗರೆಯ ಲಾರಂಭಿಸಿತು. ಹಾಗಾಗಿ ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಿತು. ಜೊತೆಗೆ ಸೋವಿಯತ್ ರಷ್ಯಾ ಸಹ ಆಗಿನ ಭಾರತೀಯ ರಾಯಭಾರಿ ಟಿ.ಎನ್ ಕೌಲ್ ಮೂಲಕ ಸಂಧಾನದ ಪ್ರಸ್ತಾವನೆಯನ್ನು ಸಲ್ಲಿಸಿತು. ಪ್ರಸ್ತಾವನೆ ಯಲ್ಲಿ ರಷ್ಯಾದ ಪ್ರಧಾನಿ ಕೊಸಿಗಿನ್ “ಪ್ರಸ್ತುತ ಸಂದರ್ಭದಲ್ಲಿ ಯಾವುದು ಸರಿ ಯಾವುದು ತಪ್ಪು ಎನ್ನುವ ಪ್ರಶ್ನೆ ಉದ್ಭವಿಸುವುದಿಲ್ಲ. ಮಿಲಿಟರಿ ಕಾರ್ಯಾಚರಣೆಯನ್ನು ತಕ್ಷಣವೇ ನಿಲ್ಲಿಸಿ. ಯುದ್ಧ ಟ್ಯಾಂಕ್‌ಗಳನ್ನು ಹಿಂದಕ್ಕೆ ಕರೆಸಿಕೊಳ್ಳಿ. ಬಂದೂಕುಗಳನ್ನು ಕೆಳಗಿಳಿಸುವಂತೆ ನಿಮ್ಮ ಸೈನಿಕರಿಗೆ ಆದೇಶ ನೀಡಿ” ಎಂದು ಮನವಿ ಮಾಡಿದ್ದರು. ಈ ಪ್ರಸ್ತಾವನೆ ನವದೆಹಲಿಯ ಪ್ರಧಾನಿ ಕಚೇರಿ ತಲುಪುತ್ತಿದ್ದಂತೆ ಶಾಸ್ತ್ರೀಜಿ ಅದನ್ನು ತಿರಸ್ಕರಿಸಿಬಿಟ್ಟರು. ಭಾರತಕ್ಕೆ ಪಾಕೀಸ್ತಾನದೊಂದಿಗೆ ಸಂಧಾನ ನಡೆಸುವುದಕ್ಕೆ ಇಷ್ಟವಿಲ್ಲ’ ಎಂದು ಮುಖಕ್ಕೆ ಹೊಡೆದಂತೆ ಹೇಳಿಬಿಟ್ಟರು. ಆದರೆ ಕೌಲ್ ಶಾಸ್ತ್ರೀಜಿಯವರ ನಿರ್ಧಾರವನ್ನು ರಷ್ಯಾಗೆ ತಿಳಿಸಲೇ ಇಲ್ಲ. ಬದಲಾಗಿ ‘ರಷ್ಯಾ ಕಾಶ್ಮೀರದ ವಿಚಾರದಲ್ಲಿ ಭಾರತದ  ಪರವಾಗಿದೆ. ಉದ್ದೇಶಿತ ಮಾತುಕತೆಯನ್ನು ಅದು ಪ್ರತಿಷ್ಠೆಯನ್ನಾಗಿ ಭಾವಿಸಿದೆ. ಹಾಗಾಗಿ ಮಾತುಕತೆಯ ನಿರ್ಧಾರವನ್ನು ಪುನರ್ ಪರಿಶೀಲಿಸಿ’ ಎಂದು ಮನವಿಮಾಡಿದರು. ಅಂತಿಮವಾಗಿ ಮಾತುಕತೆ ನಡೆಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿತು.

ಅದರಂತೆ ಶಾಸ್ತ್ರೀಜಿ ಶಾಂತಿ ಮಾತುಕತೆಗೆ ತಾಸ್ಕೆಂಟ್‌ಗೆ ಹೊರಟರು. ಅವರೊಂದಿಗೆ ಭಾರತೀಯ ನಿಯೋಗವೊಂದೂ ಹೊರಟಿತ್ತು. ಆ ನಿಯೋಗದಲ್ಲಿ ವಿದೇಶಾಂಗ ಕಾರ್ಯದರ್ಶಿ ಸಿ.ಎಸ್. ಜಾಯ್, ವಿದೇಶಾಂಗ ಸಚಿವ ಸ್ವರಣ್ ಸಿಂಗ್, ರಕ್ಷಣಾ ಮಂತ್ರಿ ವೈ.ಬಿ.ಚವಾಣ್, ಮಾಧ್ಯಮ ಸಲಹೆಗಾರ ಕುಲದೀಪ್ ನಯ್ಯರ್, ವೈದ್ಯರಾದ ಡಾ.ಆರ್.ಎನ್. ಛುಗ್, ರಷ್ಯಾದ ಭಾರತೀಯ ರಾಯಭಾರಿ ಟಿ.ಎನ್. ಕೌಲ್, ರಕ್ಷಣಾ ಅಧಿಕಾರಿ ಕಪೂರ್‌, ಪ್ರಧಾನ ಮಂತ್ರಿಯವರ ಖಾಸಗಿ ಕಾರ್ಯದರ್ಶಿ ಜೆ.ಎನ್.ಸಹಾಯ್, ಆಪ್ತ ಸಹಾಯಕ ಎಂ.ಎಂ.ಶರ್ಮಾ, ಸಹಾಯಕ ರಾಮ್‌ನಾಥ್‌ ಹೀಗೆ ಒಂದು ದೊಡ್ಡ ತಂಡವೇ ಶಾಸ್ತ್ರೀಜಿಯವರೊಂದಿಗಿತ್ತು.

ತಾಪೈಂಟ್‌ನಲ್ಲಿ ಸತತ ಏಳು ದಿನಗಳ ಕಾಲ ಶೃಂಗಸಭೆ ನಡೆಯಿತು. ತಾಪೈಂಟ್ ಮಾತುಕತೆಯಲ್ಲಿ ಕಾಶ್ಮೀರ ವಿವಾದವನ್ನು ಹೇಗಾದರೂ ಮಾಡಿ ಮುನ್ನೆಲೆಗೆ ತರುವುದಕ್ಕೆ ಪಾಕೀಸ್ತಾನ ಸರ್ವಪ್ರಯತ್ನ ಮಾಡಿತು. ತಾಪೈಂಟ್ ಸಮಾವೇಶದ ಮೊದಲ ದಿನದ ಉದ್ಘಾಟನಾ ಭಾಷಣದಲ್ಲಿ ಅಯೂಬ್ ಖಾನ್ “ಕಾಶ್ಮೀರ ಸಮಸ್ಯೆ ಇತ್ಯರ್ಥವಾದರೆ ಯುದ್ಧ ನಿಷೇಧ ಒಪ್ಪಂದಕ್ಕೆ ಸಹಿ ಹಾಕಲು ಸಿದ್ಧ” ಎಂದು ಘೋಷಿಸಿದರು. ಆದರೆ ಶಾಸ್ತ್ರೀಜಿ ಕಾಶ್ಮೀರ ವಿವಾದವನ್ನು ಮುನ್ನೆಲೆಗೆ ತರುವುದಕ್ಕೆ ಅವಕಾಶವನ್ನೇ ಕೊಡಲಿಲ್ಲ. “ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಮತ್ತು ಅದರ ಬಗ್ಗೆ ಯಾವುದೇ ಚರ್ಚೆಗೆ ಅವಕಾಶವಿಲ್ಲ” ಎಂದು ಖಡಾಖಂಡಿತವಾಗಿ ಹೇಳಿಬಿಟ್ಟರು. ಕೊನೆಗೆ ಅಯೂಬ್ ಖಾನ್ ಕೇವಲ ಯುದ್ಧನಿಷೇಧ ಒಪ್ಪಂದದ ಬಗ್ಗೆ ಚರ್ಚಿಸಲು ಸಿದ್ಧರಾದರು. ಕೊಡು-ಕೊಳ್ಳುವ ಸೂತ್ರಕ್ಕೆ ಶಾಸ್ತ್ರೀಜಿ ಒಪ್ಪಿಗೆ ನೀಡಿದರು. ಮಾತುಕತೆ ಪ್ರಾರಂಭವಾಯಿತು. ಭಾರತ ಆಕ್ರಮಿಸಿಕೊಂಡಿರುವ ಪಾಕೀಸ್ತಾನದ ಎಲ್ಲ ಪ್ರದೇಶಗಳಿಂದ ಹಿಂದೆ ಸರಿದರೆ ಮಾತ್ರ ತಾನು ಛಾಂಬ್ ಪ್ರದೇಶದಿಂದ ಹಿಂದೆ ಸರಿಯುವುದಾಗಿ ಪಾಕೀಸ್ತಾನ ಹೇಳಿತು. ಆದರೆ ಶಾಸ್ತ್ರೀಜಿ ಛಾಂಬ್, ಹಾಜೀಪೀರ್ ಪಾಸ್, ತಿತ್ವಾಲ್ ಈ ಎಲ್ಲವೂ ಜಮ್ಮು-ಕಾಶ್ಮೀರದ ಭಾಗವಾಗಿರುವಾಗ ಭಾರತೀಯ ಸೇನೆ ಅಲ್ಲಿಂದ ಹಿಂದೆ ಸರಿಯಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದರು. ಹಾಗಾಗಿ ಒಂದು ಹಂತದಲ್ಲಿ ಮಾತುಕತೆ ಬಹುತೇಕ ಸ್ಥಗಿತಗೊಂಡಿತ್ತು. ಪಾಕೀಸ್ತಾನ ಭಾರತದೊಂದಿಗೆ ಮುಂದೆಂದೂ ಯುದ್ಧಕ್ಕೆ ಬಾರದಂತೆ ಮಾಡುವುದು ಶಾಸ್ತ್ರೀಜಿಯವರ ಉದ್ದೇಶವಾಗಿತ್ತು. ಇತ್ತ ವಿದೇಶಾಂಗ ಸಚಿವರ ಮಾತುಕತೆಯೂ ಮುರಿದುಬಿತ್ತು. ಇದರಿಂದ ಗಾಬರಿಗೊಂಡ ರಷ್ಯಾ ಅಧ್ಯಕ್ಷ ಕೊಸಿಗಿನ್ ಪರಿಸ್ಥಿತಿಯನ್ನು ಮತ್ತೆ ಮಾತುಕತೆಯ ಹಾದಿಗೆ ತರುವುದಕ್ಕೆ ಮುಂದಾದರು. ಕಾಶ್ಮೀರ ವಿಚಾರದಲ್ಲಿ ಕೊಂಚ ರಿಯಾಯಿತಿ ತೋರಬೇಕೆಂದು ಕೊಸಿಗಿನ್ ಶಾಸ್ತ್ರೀಜಿಯವರನ್ನು ಒತ್ತಾಯಿಸಿದರು. ಆದರೆ ಶಾಸ್ತ್ರೀಜಿ ಅದಕ್ಕೆ ಒಪ್ಪಲಿಲ್ಲ. “ಭಾರತದ ಸಾರ್ವಭೌಮತ್ವದ ವಿಚಾರದಲ್ಲಿ ರಾಜಿ, ಮಧ್ಯಸ್ಥಿಕೆ ಅಥವಾ ಮಾತುಕತೆ ಸಾಧ್ಯವಿಲ್ಲ” ಎಂದುಬಿಟ್ಟರು. ಶಾಸ್ತ್ರೀಜಿಯವರು ತಮ್ಮ ನಿಲುವನ್ನು ಬದಲಿಸುವುದಿಲ್ಲ ಎಂದು ಅರಿತ ಕೊಸಿಗಿನ್ ಪಾಕೀಸ್ತಾನದ ಮೇಲೆ ಒತ್ತಡ ಹೇರಲು ಪ್ರಾರಂಭಿಸಿದರು. ಶಾಸ್ತ್ರೀಜಿ ಮಂಡಿಸಿದ್ದ ಯುದ್ಧ ನಿಷೇಧ ಷರತ್ತಿಗೆ ಪಾಕೀಸ್ತಾನದ ಅಧ್ಯಕ್ಷ ಅಯೂಬ್ ಖಾನ್ ಮಣಿಯಬೇಕಾಯಿತು. ಪಾಕೀಸ್ತಾನ ಮುಂದೆಂದೂ ಕಾಶ್ಮೀರದಲ್ಲಿ ಗೆರಿಲ್ಲಾ ಮಾದರಿಯ ಆಕ್ರಮಣ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟಿತು. ಅಂತಿಮವಾಗಿ ಎರಡೂ ದೇಶಗಳು ತಾವು ಆಕ್ರಮಿಸಿಕೊಂಡಿದ್ದ ಪ್ರದೇಶದಿಂದ ಹಿಂದೆ ಸರಿಯುವ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿದವು. ಶೃಂಗಸಭೆಯಲ್ಲಿ ಶಾಂತಿ ಸಂಧಾನಕ್ಕೆ ಉಭಯ ನಾಯಕರಿಂದ ಸಹಿ ಬಿತ್ತು.

ಶೃಂಗಸಭೆಯ ಯಶಸ್ಸಿನ ಹಿನ್ನೆಲೆಯಲ್ಲಿ ಸೋವಿಯತ್ ಒಕ್ಕೂಟ ಅಂದು ಸಂಜೆ ಭಾರಿ ಔತಣಕೂಟವನ್ನು ಏರ್ಪಡಿಸಿತ್ತು. ರಷ್ಯಾಗೆ ಜಗತ್ತಿನ ಎದುರು ತನ್ನ ಗೌರವವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ತಾಪೈಂಟ್ ಘೋಷಣೆ ಅತಿ ಮುಖ್ಯವಾಗಿತ್ತು. ಹಾಗಾಗಿ ಅದರ ಆಚರಣೆಗೆ ಸಂತೋಷಕೂಟ ನಡೆದಿತ್ತು. ಪಾರ್ಟಿಯಲ್ಲಿ ಎರಡೂ ದೇಶಗಳ ನಾಯಕರು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು. ಪಾರ್ಟಿಯಲ್ಲಿ ವಿಸ್ಕಿ ನೀರಿನ ಹೊಳೆಯಂತೆ ಹರಿದಿತ್ತು. ಮೋಜು ಮಸ್ತಿ ಜೋರಾಗಿತ್ತು. ಶಾಸ್ತ್ರೀಜಿಯವರು ಸ್ವಲ್ಪ ಹೊತ್ತಷ್ಟೇ ಅಲ್ಲಿದ್ದು ಅನಂತರ ಅಲ್ಲಿಂದ ತಮ್ಮ ಹೋಟೆಲ್‌ಗೆ ಹೊರಟರು. ಜೊತೆಯಲ್ಲಿ ಭಾರತೀಯ ಅಧಿಕಾರಿಗಳಿದ್ದರು. ಅವರಾರಿಗೂ ಮುಂದೇನು ನಡೆಯುತ್ತದೆ ಎನ್ನುವ ಸಣ್ಣ ಸುಳಿವೂ ಇರಲಿಲ್ಲ. ಎಲ್ಲ ಕೆಲಸಗಳನ್ನೂ ಮುಗಿಸಿ ಶಾಸ್ತ್ರೀಜಿ ರಾತ್ರಿ ಮಲಗಲು ಅಣಿಯಾಗುತ್ತಿದ್ದರು. ಅಷ್ಟರಲ್ಲಿ ಭಾರತೀಯರು ಊಹಿಸಲೂ ಅಸಾಧ್ಯವಾದ ಘಟನೆಯೊಂದು ತಾಷ್ಕೆಂಟ್ ನಲ್ಲಿ ನಡೆದುಹೋಯಿತು.

ಮೂಲ ಲೇಖಕರು: ಎಸ್ ಉಮೇಶ್

Leave a Reply

Your email address will not be published.

ಪಿಎಫ್ ಐ ಸೇರಿ ಹಲವು ಸಂಘಟನೆಗಳು ಭಾರತದಲ್ಲಿ ಬ್ಯಾನ್ - ಪಿಎಫ್ ಐ ಸೇರಿ ಹಲವು ಸಂಘಟನೆಗಳು ಭಾರತದಲ್ಲಿ ಬ್ಯಾನ್ - ನಮ್ಮ ವಿರುದ್ಧ ಷಡ್ಯಂತ್ರ ನಡೆದಿದೆ; ಸಿ ಎಫ್ ಐ ರಾಜ್ಯ ಕಾರ್ಯದರ್ಶಿ ಸರ್ಪರಾಜ್ - ನಮ್ಮ ವಿರುದ್ಧ ಷಡ್ಯಂತ್ರ ನಡೆದಿದೆ; ಸಿ ಎಫ್ ಐ ರಾಜ್ಯ ಕಾರ್ಯದರ್ಶಿ ಸರ್ಪರಾಜ್ - ನಮ್ಮ ವಿರುದ್ಧ ಷಡ್ಯಂತ್ರ ನಡೆದಿದೆ; ಸಿ ಎಫ್ ಐ ರಾಜ್ಯ ಕಾರ್ಯದರ್ಶಿ ಸರ್ಪರಾಜ್ - ನಮ್ಮ ವಿರುದ್ಧ ಷಡ್ಯಂತ್ರ ನಡೆದಿದೆ; ಸಿ ಎಫ್ ಐ ರಾಜ್ಯ ಕಾರ್ಯದರ್ಶಿ ಸರ್ಪರಾಜ್ - ಕೊಪ್ಪಳದಲ್ಲಿ ಮತ್ತೆ ಇಬ್ಬರನ್ನು ವಶಕ್ಕೆ ಪಡೆದ (NIA) ಎನ್ಐಎ - ಕೊಪ್ಪಳದಲ್ಲಿ ಮತ್ತೆ ಇಬ್ಬರನ್ನು ವಶಕ್ಕೆ ಪಡೆದ (NIA) ಎನ್ಐಎ - ಕೊಪ್ಪಳದಲ್ಲಿ ಮತ್ತೆ ಇಬ್ಬರನ್ನು ವಶಕ್ಕೆ ಪಡೆದ (NIA) ಎನ್ಐಎ - ಕೊಪ್ಪಳದಲ್ಲಿ ಮತ್ತೆ ಇಬ್ಬರನ್ನು ವಶಕ್ಕೆ ಪಡೆದ (NIA) ಎನ್ಐಎ
error: Content is protected !!