ಬೆಂಗಳೂರು: ಈಗ ನನಗೆ ಯಾರ ವಿಚಾರವೂ ಬೇಡ. ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತೆ ಎಂದು ಹೇಳುವ ಮೂಲಕ ಮಾಜಿ ಸಚಿವ ಡಿಕೆ ಶಿವಕುಮಾರ್, ಅನರ್ಹ ಶಾಸಕ ಎಂಟಿಬಿ ನಾಗರಾಜ್ ವಿಚಾರದಲ್ಲಿ ಯೂಟರ್ನ್ ತೆಗೆದುಕೊಂಡಿದ್ದಾರೆ.
ಜೈಲಿಂದ ಹೊರ ಬಂದ ಬಳಿಕ ಮಾಜಿ ಸಚಿವ ಡಿಕೆ ಶಿವಕುಮಾರ್ ಟೆಂಪಲ್ ರನ್ ಮುಂದುವರಿಸಿದ್ದಾರೆ. ಸೋಮವಾರ ಸಂಜೆ ಕನಕಪುರದ ಕಬ್ಬಾಳು ಗ್ರಾಮದೇವತೆ ಕಬ್ಬಾಳಮ್ಮಗೆ ಪೂಜೆ ಸಲ್ಲಿಸಿದ್ದ ಡಿಕೆ, ರಾತ್ರಿ 10 ಗಂಟೆಗೆ ಬೆಂಗಳೂರಿನ ವಿಜಯನಗರದಲ್ಲಿರೋ ಚುಂಚನಗಿರಿ ಮಠಕ್ಕೆ ತೆರಳಿದರು. ಶ್ರೀಮಠದ ಪೀಠಾಧಿಪತಿ ನಿರ್ಮಲಾನಂದ ಸ್ವಾಮೀಜಿ ಆಶೀರ್ವಾದ ಪಡೆದರು. ಸತತ 3 ಗಂಟೆಗಳ ಕಾಲ ಶ್ರೀಗಳ ಜೊತೆ ರಹಸ್ಯ ಚರ್ಚೆ ನಡೆಸಿ ಕುತೂಹಲ ಮೂಡಿಸಿದ್ರು.
ಭೇಟಿ ಬಳಿಕ ಮಾತನಾಡಿದ ಡಿಕೆಶಿ, ಏನೆಲ್ಲಾ ಚರ್ಚೆ ಆಯ್ತು ಅಂತ ಹೇಳೋಕ್ಕಾಗಲ್ಲ ಅಂತ ಸುಮ್ಮನಾದರು. ಇದೇ ವೇಳೆ, ಎಂಟಿಬಿ ನಾಗರಾಜ್ ವಿಚಾರದಲ್ಲಿ ಅದ್ಯಾಕೋ ಯೂಟರ್ನ್ ತೆಗೆದುಕೊಂಡ್ರು. ಈಗ ನನಗೆ ಯಾರ ವಿಚಾರವೂ ಬೇಡ. ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತೆ ಎಂದು ಹೇಳಿದರು.
ಈ ಹಿಂದೆ ಎಂಟಿಬಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡೋ ಸಂದರ್ಭದಲ್ಲಿ ಅವರ ವಿರುದ್ಧ ಗುಡುಗಿದ್ದ ಡಿಕೆಶಿ, ಹೊಸಕೋಟೆ ಅಖಾಡದಲ್ಲಿ ನೋಡಿಕೊಳ್ಳೋಣ ಅಂತ ಸವಾಲು ಹಾಕಿದ್ದರು. ಆದರೆ ನಿನ್ನೆಯ ಮಾತು ಅದಕ್ಕೆ ಸಂಪೂರ್ಣವಾಗಿ ಉಲ್ಟಾ ಇತ್ತು. ಕೆಪಿಸಿಸಿ ಅಧ್ಯಕ್ಷ ಗಾದಿ ಕೈಗೆ ಸಿಗೋವರೆಗೂ, ಅನಾರೋಗ್ಯದ ನೆಪ ಹೇಳಿ ಪಕ್ಷದ ಚಟುವಟಿಕೆ, ಉಪಚುನಾವಣಾ ಪ್ರಚಾರದಿಂದ ದೂರ ಇರ್ತಾರಾ ಅನ್ನೋ ಪ್ರಶ್ನೆ ಡಿಕೆ ನಡೆಯಿಂದ ಉದ್ಭವಿಸಿವೆ. ಇತ್ತ ಸಿದ್ದರಾಮಯ್ಯ ವೀಡಿಯೋ ವಿವಾದದಿಂದ ಡಿಕೆಶಿ ಬೇಸರಗೊಂಡಿದ್ದಾರಾ ಅನ್ನೋ ಪ್ರಶ್ನೆಗಳು ಕೂಡ ಕಾಡುತ್ತವೆ.
ಡಿಕೆಶಿ ಸವಾಲೇನಾಗಿತ್ತು?
ದೋಸ್ತಿ ಸರ್ಕಾರ ಪತನಕ್ಕೂ ಮುನ್ನ ವಿಧಾನಸಭೆಯಲ್ಲಿ ನಡೆದಿದ್ದ ವಿಶ್ವಾಸಮತ ಚರ್ಚೆಯ ವೇಳೆ ಡಿಕೆಶಿ ಅವರು ಎಂಟಿಬಿ ಹೇಳಿಕೆಯನ್ನು ಪ್ರಸ್ತಾಪಿಸಿದ್ದರು. ನನ್ನ ನಿನ್ನ ಭೇಟಿ ಹೊಸಕೋಟೆಯ ರಾಜಕೀಯ ರಣರಂಗದಲ್ಲಿ ಎಂದು ಎಂಬಿಟಿಬಿ ಹೇಳಿದ್ದಾರೆ. ಇರಲಿ ನಾನು ಅವರನ್ನು ಅಲ್ಲೇ ಭೇಟಿ ಮಾಡುತ್ತೇನೆ ಎಂದು ಹೇಳಿದ್ದರು.