ವಿಠ್ಠಪ್ಪ ಗೋರಂಟ್ಲಿಯವರ ‘ಸೇತುಬಂಧ’ ಕವನಸಂಕಲನದ ಅವಲೋಕನ

(ದಿನಾಂಕ: ೨೨-೦೮-೨೦೨೧ ರಂದು ನಡೆಯುವ ದಿ|| ಶ್ರೀ ವಿಠ್ಠಪ್ಪ ಗೋರಂಟ್ಲಿಯವರ ನುಡಿನಮನ ರಾಜ್ಯಮಟ್ಟದ ಸೆಮಿ-ವೆಬಿನಾರ್ ಕಾರ್ಯಕ್ರಮ ನಿಮಿತ್ಯ ಅವರ “ಸೇತುಬಂಧ” ಕವನ ಸಂಕಲನದ ಅವಲೋಕನದ ವಿಶೇಷ ಲೇಖನ)

ಡಾಕ್ಟರ್ ಸಿದ್ಧಲಿಂಗಪ್ಪ ಕೊಟ್ನೆಕಲ್ ಅವರಿಂದ

ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್

ಹಿರಿಯ ಶ್ರೇಣಿ ಕನ್ನಡ ಉಪನ್ಯಾಸಕರು
ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ,
ಕೊಪ್ಪಳ-೫೮೩೨೩೧
ಮೊ ಸಂ : ೯೪೪೮೫೭೦೩೪೦
E-mail-skotnekal@gmai.com

“ಈ ಊರಿಂದ ಆ ಊರಿಗೆ, ಈ ಹೃದಯದಿಂದ ಆ ಹೃದಯಕ್ಕೆ, ಕಟ್ಟಬೇಕಿದೆ ಸೇತುವೆ, ಕೈ ಜೋಡಿಸಲು ಬರುವಿರಾ? ಅದಕಾಗಿ ನಿಮ್ಮ ಪ್ರೀತಿ ಪ್ರೇಮಗಳ, ಕಲ್ಲು ಗಾರೆಗಳ ಹೊತ್ತು ತರುವಿರಾ? ಒಡೆಯುವುದು ಸುಲಭ, ಕಟ್ಟುವುದು ಕಷ್ಟ, ಒಡೆದ ಮನಸುಗಳ, ಬೆಂದ ಭಾವನೆಗಳ, ಬೆಸದು ಕಟ್ಟಬೇಕಿದೆ ಸೇತುವೆ, ಒಟ್ಟುಗೂಡಿ ಬರುವಿರಾ?” ಎಂದು ಆಹ್ವಾನಿಸಿರುವ ಕವಿ ಶ್ರೀ ವಿಠ್ಠಪ್ಪ ಗೋರಂಟ್ಲಿಯವರು ಸೇತುವೆಯನ್ನು ಕಟ್ಟಲೋ, ಮನಸು ಕಟ್ಟಲೋ, ಪ್ರೀತಿ-ಪ್ರೇಮಗಳ ಕಟ್ಟಲೋ ಅದನ್ನು ಸಹಹೃದಯರೇ ನಿರ್ಧರಿಸಬೇಕಿದೆ. ಹಲವು ಜಾತಿ, ಧರ್ಮ, ಭಾಷೆಗಳನ್ನು ಹೊಂದಿರುವ ಅನೇಕತೆಯ ನಮ್ಮ ದೇಶದಲ್ಲಿ ಸಮಾನತೆ, ಸಹಬಾಳ್ವೆ, ಸಮಪ್ರೀತಿಯ ಸೇತುವೆಯನ್ನು ಕಟ್ಟಬೇಕಿದೆ; ಒಡೆದು ಹೋದ ಮನಸ್ಸುಗಳನ್ನು ಕಟ್ಟಬೇಕಿದೆ. ಏಕತೆಯ ಸೇತುವೆ ಕಟ್ಟಬೇಕಿದೆ, ಸಂಬಂಧಗಳನ್ನು ಕಟ್ಟಬೇಕಿದೆ ಎಂಬ ವಾಸ್ತವವನ್ನು ಜಗತ್ತು ಅರಿಯಬೇಕಿದೆ. ಶ್ರೀ ವಿಠ್ಠಪ್ಪ ಗೋರಂಟ್ಲಿಯವರ ಈ ಮಾತುಗಳು ‘ಸೇತುಬಂಧ’ ಎಂಬ ಕವನ ಸಂಕಲನದಿAದ ಆಯ್ದುಕೊಂಡಿದ್ದರೂ; ಅದು ಹೊಡೆದುಹೋದ ಸಂಬಂಧಗಳನ್ನು ಬೆರಳುಮಾಡಿ ತೋರಿದಂತಿದೆ. ‘ಸೇತು’ ಎಂಬ ‘ಸಂಬಂಧ’ಗಳನ್ನು ಬೆಸೆಯಿರಿ ಎಂಬ ಸಲಹೆ ಕಾಣುತ್ತೇವೆ.


ಶ್ರೀ ವಿಠ್ಠಪ್ಪ ಗೋರಂಟ್ಲಿಯವರು ನಾಲ್ಕನೆ ತರಗತಿಯವರೆಗೆ ಮಾತ್ರ ಅಭ್ಯಾಸ ಮಾಡಿದ್ದಾರೆ. ಅವರನ್ನು ಯಾರು ನೋಡಿದರೂ ಅವರೊಬ್ಬ ಹಳ್ಳಿಗರಂತೆ ಕಾಣುತ್ತಿದ್ದ ಅವರು, ಬಿಳಿ ಪಂಚೆ, ಬಿಳಿ ಅಂಗಿ ತೊಟ್ಟು, ಕೊಂಕಳಲ್ಲಿ ಒಂದು ಬ್ಯಾಗ್ ಹಿಡಿದು ಅವರು ನಡೆದಾಡಿದ ನೆಲವನ್ನು ಲೆಕ್ಕ ಮಾಡಲು ಸಾಧ್ಯವೇ ಇಲ್ಲ ಎನ್ನಬಹುದು. ಯಾಕೆಂದರೆ ಅವರೊಬ್ಬ ಹೋರಾಟಗಾರರು, ಪ್ರಗತಿಪರ ಚಿಂತಕರು, ಮೇಲಾಗಿ ಸಂಘಟಕರೂ ಆಗಿದ್ದರು. ಅವರು ಸಾಹಿತ್ಯ, ಸಂಘಟನೆ, ಹೋರಾಟ ಮತ್ತು ಜಾಗೃತಿಗಾಗಿ ದೇಶದ ತುಂಬೆಲ್ಲಾ ಸುತ್ತಾಡಿದ್ದಾರೆ. ದೌರ್ಜನ್ಯ-ದಬ್ಬಾಳಿಕೆ ಅನ್ಯಾಯಗಳು ಎಲ್ಲೇ ನಡೆದರೂ ಅಲ್ಲಿ ಅವರು; ವತ್ತವರ ಗೆಳೆಯರು ಹಾಜರಿ ಇರುತ್ತದೆ. ಇದು ಶ್ರೀ ವಿಠ್ಠಪ್ಪ ಗೋರಂಟ್ಲಿಯವರ ಪ್ರಗತಿಪರ ವಿಚಾರವಂತಿಕೆಯನ್ನು ತೋರುತ್ತದೆ. ಹೀಗಾಗಿ ಅವರು ಸುತ್ತಾಡುತ್ತಲೇ ಇದ್ದು ಹೋದವರು.
ಶ್ರೀ ವಿಠ್ಠಪ್ಪ ಗೋರಂಟ್ಲಿಯವರ ವಂಶಸ್ಥರ ಮೂಲ ಕೊಪ್ಪಳ ತಾಲ್ಲೂಕಿನ ಕಾತರಕಿ-ಗುಡ್ಲಾನೂರು ಗ್ರಾಮ. ಹೊಸಪೇಟೆ ಹತ್ತಿರ ತುಂಗಭದ್ರ ಅಣೆಕಟ್ಟು ಕಟ್ಟಿದಾಗ ಹಿನ್ನಿರು ಹೆಚ್ಚಾದಂತೆ ನದಿಯ ತಟದಲ್ಲಿರುವ ಆನೇಕ ಗ್ರಾಮಗಳು ಮುಳುಗಡೆಯಾದವು. ಅದರಲ್ಲಿ ಕಾತರಕಿ-ಗುಡ್ಲಾನೂರು ಗ್ರಾಮವೂ ಒಂದು. ಹೀಗಾಗಿ ಆ ಗ್ರಾಮ ಮುಳುಗಡೆಯಾದ ನಂತರ ಅಲ್ಲಿದ್ದ ಜನರು ಬೇರೆ ಬೇರೆ ಗ್ರಾಮಗಳಿಗೆ ತೆರಳಿದರು. ಅದರಲ್ಲಿ ಬಹುತೇಕ ಜನರು ಕೊಪ್ಪಳದ ಭಾಗ್ಯನಗರಕ್ಕೆ ಹೊಲಸೆ ಬಂದರು. ಅದರಲ್ಲಿ ಶ್ರೀ ವಿಠ್ಠಪ್ಪ ಗೋರಂಟ್ಲಿಯವರ ಕುಟುಂಬವೂ ಒಂದು. ಶ್ರೀ ವಿಠ್ಠಪ್ಪ ಗೋರಂಟ್ಲಿಯವರ ಕುಟುಂದ ಮೂಲ ವೃತ್ತಿ ನೇಕಾರಿಕೆ. ಕಾಲಾಂತರದಲ್ಲಿ ಆ ನೇಕಾರಿಕೆ ವೃತ್ತಿಯನ್ನು ಬಿಟ್ಟು ವಿಠ್ಠಪ್ಪ ಗೋರಂಟ್ಲಿಯರು ಪತ್ರಿಕಾ ರಂಗದ ಕಡೆಗೆ ವಾಲಿದರು. ಆರಂಭದಲ್ಲಿ ಪಿ.ಲಂಕೇಶ್‌ರವರ ‘ಲಂಕೇಶ್’ ಪತ್ರಿಕೆಯಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ನಂತರ ಸುದ್ದಿಮೂಲ ಹಾಗು ಬೇರೆ ಬೇರೆ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಈ ಪತ್ರಿಕಾ ರಂಗದ ಸೇವೆಗಾಗಿ ‘ಮಾಧ್ಯಮ ಆಕಾಡೆಮಿ ಪ್ರಶಸ್ತಿ’ಯನ್ನೂ ಪಡೆದಿದಿರುವುದು ಹೆಮ್ಮೆಯ ಸಂಗತಿ. ಅಲ್ಲದೇ ಕರ್ನಾಟಕ ರಾಜ್ಯ ಸರಕಾರದಿಂದ ರಾಜ್ಯೋತ್ಸವ ಪ್ರಶಸ್ತಿಯನ್ನೂ ಪಡೆದಿರುವುದು ಅವರ ಸಾಹಿತ್ಯದ ಸೇವೆ ಮತ್ತು ಸಾಮಾಜಿಕ ಹೋರಾಟಗಳಿಗೆ ಸಂದ ಸನ್ಮಾನ ಎನ್ನಬಹುದು.
ಶ್ರೀ ವಿಠ್ಠಪ್ಪ ಗೋರಂಟ್ಲಿಯವರು ಹೋರಾಟ, ಸಂಘಟನೆ ಜೊತೆ ಜೊತೆಗೆ ಅನೇಕ ಸಾಹಿತಿಕ ಕೃತಿಗಳನ್ನು ಪಕ್ರಟಿಸಿ ಸಾರಸತ್ವಲೋಕದ ಸೇವೆಯನ್ನೂ ಮಾಡಿದ್ದಾರೆ. ಕಪ್ಪೊಡಲ ಕರೆ, ಈ ನೆಲದೊಡಲಲ್ಲಿ, ಯಾರೂ ಹಾಡದ ಹಾಡು ಎಂಬ ಕವನ ಸಂಕಲನಗಳು, ಕಡಲೊಡಲಿನ ನೂರೆಂಟು ಹನಿಗಳು ಎಂಬ ಹನಿಗವನ ಸಂಕಲನ, ನಿನ್ನ ನೀನು ತಿಳಿ ಎಂಬ ಸ್ವರಚಿತ ತತ್ವಪದ ಸಂಕಲನ, ಸೆರೆ, ಆತ್ಮಾನಸ್ತು ಕಾಮಾಯಾ ಎಂಬ ಕಥಾ ಸಂಕಲನಗಳನ್ನು, ಹನುಮಂತಪ್ಪ ಅಂಗಡಿ, ಹಾಗೂ ಶ್ರೀ ಸದಾನಂದ ಚರಿತ್ರೆ ಎಂಬ ಜೀವನ ಚರಿತ್ರೆ, ತನಿಖಾ ವರದಿ ಎಂಬ ಪತ್ರಿಕೋದ್ಯಮದ ಮಾಹಿತಿ, ಒಳನೋಟ ಎಂಬ ಅಂಕಣ ಬರಹ, ಪದ್ಮಸಾಲಿ ಸಮಾಜ ಎಂಬ ನೇಕಾರಿಕೆ ವೃತ್ತಿಯ ಪರಿಚಯ ಅಲ್ಲದೆ ದೇವರ ದಾಸಿಮಯ್ಯನವರ ವಚನಗಳ ಪ್ರಸ್ತುತತೆ, ನೆಕಾರಿಕೆ, ಕೊಪ್ಪಳ ಜಿಲ್ಲಾ ರಂಗ ಮಾಹಿತಿ, ತುಂಗಭದ್ರೆಯ ಅಳಲು ಮುಂತಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಅಲ್ಲದೆ ಅನೇಕ ಸಂಪಾದನಾ ಕೃತಿಗಲ್ಲಿಯೂ ಸಹ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.
‘ಸೇತುಬಂಧ’ ಎಂಬ ಈ ಕೃತಿಯು ಶ್ರೀ ವಿಠ್ಠಪ್ಪ ಗೋರಂಟ್ಲಿಯವರ ಆರನೇ ಕವನ ಸಂಕಲನ. ಅವರು ವಯಸ್ಸಿನಲ್ಲಿ ಹಿರಿಯರು, ಬಹಳ ಅನುಭವಿಗಳು ಮತ್ತು ಇದು ಅವರ ಆರನೇ ಕವನ ಸಂಕಲನವಾಗಿದ್ದರಿದ ಇದರಲ್ಲಿ ಘಟ್ಟಿತನ ಇಲ್ಲವೆ ಪ್ರಭುತ್ವ ಇರುವುದುವುದು ಸಹಜವೇ ಹೊರತು ವಿಶೇಷೇನವಲ್ಲ ಎನ್ನಬಹುದು. ಈ ಸಂಕಲನದಲ್ಲಿ ೭೯ ಕವನಗಳು ಮತ್ತು ಸುಮಾರು ೨೩ ಹನಿಗವನಗಳಿವೆ. ಇದರಲ್ಲಿ ಕವನ ಮತ್ತು ಹನಿಗವನದ ಜೊತೆಗೆ ಗಜಲ್‌ಗಳೂ ಸಹ ಇರುವುದು ಬಹಳ ವಿಶೇಷ. ಯಾಕೆಂದರೆ ಗಜಲ್ ಬರೆಯುವವರ ಸಂಖ್ಯೆ ಬಹಳ ಕಡಿಮೆ. ಅದರಲ್ಲಿ ಕೊಪ್ಪಳ ಜಿಲ್ಲೆಯಲ್ಲಂತೂ ತೀರಾ ಕಡಿಮೆ ಎನ್ನಬಹುದು.
ಮುನ್ನುಡಿ ಬರೆದ ಶ್ರೀ ಈರಪ್ಪ ಕಂಬಳಿಯವರು “ಈ ಕೃತಿ ಕವಿ ವಿಠ್ಠಪ್ಪ ಗೋರಂಟ್ಲಿಯವರ ಆರನೆಯ ಕವನ ಸಂಗ್ರಹವಾಗಿದೆ. ಯೌವನದ ಆರಂಭದಲ್ಲಿ ಪ್ರತಿಯೊಬ್ಬರಿಗೂ ಕವಿ ಹೃದಯವಿರುತ್ತದೆ. ಆ ಆವೇಶದಲ್ಲಿ, ಕವಿ ಮನದ ಹುಡುಗ/ಹುಡುಗಿಯರು ಒಂದು ಕವನ ಸಂಗ್ರಹ ಪ್ರಕಟಿಸಿ ಬಿಡುತ್ತಾರಂತೆ, ಮುಂದೆ ಅದನ್ನು ಮೀರಿ ಎರಡು, ಮೂರು ಕವನ ಸಂಕಲನ ಪ್ರಕಟಿಸಿದರಾದರೆ ಅವರೊಳಗಿನ ಕವಿ ಜೀವಂತವಾಗಿದ್ದಾನೆಂದು ಪರಿಭಾವಿಸುವುದುಂಟು” ಎಂದಿರುವುದು ವಾಸ್ತವ ಸಂಗತಿ. ಹೀಗಾಗಿ ಶ್ರೀ ಗೋರಂಟ್ಲಿಯವರ ಇಲ್ಲಿನ ಕವನಗಳು ಕವಿತ್ವದ ಎಲ್ಲಾ ಅಂಶಗಳನ್ನು ಈ ‘ಸೇತುಬಂಧ’ ಕೃತಿಯಲ್ಲಿ ಕಾಣಬಹುದಾಗಿದೆ.
ನೂರಾಮೂವತ್ತು ಕೋಟಿ ಜನರಿರುವ ನಮ್ಮ ಇಂತಹ ಬೃಹತ್ ದೇಶದಲ್ಲಿ ‘ಬರೆಯಲಾಗದ ನೂರು’ ಕಥೆಗಳಿರುವುದು ಸಹಜವೇ ಸರಿ. “ಹೇಳಲಾಗದ ಮನದ ವ್ಯಥೆಗಳು ಒಡಲ ತುಂಬಿ ಕಾಡುತಿಹವು” ಇದು ಕವಿಯ ಮನೋ ತುಡಿತ. ಯಾಕೆಂದರೆ ಕವಿಯ ಒಳಗೆ ವ್ಯಥೆಗಳು ಕಾಡಬೇಕು, ಸಮಾಜದ ಸಮಸ್ಯೆಗಳು ಕಾಣಬೇಕು. ಆಗ ಮಾತ್ರ ಕವಿಯಾಗಲು ಸಾಧ್ಯವಿದೆ. ಕವಿ ಸಾಯಲೂಬಹುದು ಆದರೆ ಅವನು ಸಮಾಜಕ್ಕೆ ಕೊಟ್ಟು ಹೋದ ಕೊಡುಗೆ ಅಜರಾಮರ ಎಂಬುದು ಮಾತ್ರ ಶತ-ಶತಮಾನಗಳಿಂದಲೂ ಕಂಡುಕೊಂಡು ಬಂದಿರುವ ಸತ್ಯ. ಮನುಷ್ಯನಿಗೆ ಸಾವಿದೆ ನಿಜ; ಆದರೆ ಸಾಹಿತ್ಯಕ್ಕೆ? ಅದು ಸಾವಿಲ್ಲದ ಸಂಭ್ರಮ ಎನ್ನಬಹುದು. ಸಾಹಿತ್ಯವನ್ನು ಸಂಭ್ರಮವನ್ನಾಗಿ ಆಚರಿಸುವವರೂ ಇದಾರೆ. ‘ಕವಿ ಸತ್ತು ಕವಿತೆ ಉಳಿಯಬೇಕು’ ಎಂಬ ಮಾತುಗಳಲ್ಲಿ ಗೋರಂಟ್ಲಿಯವರು “ಕವಿಯಿಂದ ಕವಿತೆ, ಕವಿಯನ್ನು ಮೀರಿ ಬೆಳೆಯುತ್ತದೆ. ತಲೆತಲೆಗೂ ಹರಡಿ ಕೊನೆಗೆ, ಬೀಜವಾಗಿ ಉಳಿತ್ತದೆ. ಮತ್ತೆಲ್ಲೋ ಚಿಗುರೊಡೆದು ಹೊಸರೂಪ ತಳೆಯುತ್ತದೆ. ಕವಿ ಸತ್ತು ಹೀಗೆ ಕಾವ್ಯ ಬದುಕಬೇಕು” ಎಂಬ ಮಾತುಗಳನ್ನು ಕೇಳಿದಾಗಲಂತೂ ಸಮಾಜದಲ್ಲಿ ಕವಿಯ ಮಹತ್ವ ಎಷ್ಟೆಂಬುದು ಮನವರಿಕೆಯಾಗದೇ ಇರದು.
ಮನುಷ್ಯ ಮೊದಲು ತನ್ನನ್ನು ತಾನು ತಿಳಿದಕೊಳ್ಳಬೇಕಿದೆ. ತನ್ನೊಳಗಿನ ಮನುಷ್ಯತ್ವವನ್ನು ನೋಡಿಕೊಳ್ಳಬೇಕಿದೆ. ಕನ್ನಡಿಯ ಮುಂದೆ ನಿಂತುಕೊಂಡು ನೋಡಿಕೊಂಡಾಗ, ತನ್ನ ಮನುಷ್ಯತ್ವ ಅರಿಕೊಂಡಾಗ ಆಗ ಮಾತ್ರ ಒಬ್ಬ ಮನುಷ್ಯತ್ವದ ಮನುಷ್ಯನಾಗಿರಲು ಸಾಧ್ಯವಿದೆ. “ಆಕಸ್ಮಿಕವಾಗಿ ಕನ್ನಡಿಯಲ್ಲಿ ಕಂಡ ನನ್ನದೇ ಮುಖ ನನಗೆ ಅಪರಿಚಿತವಾಗಿ” ಕಂಡಾಗ ಅವನ ಒಳ ಬದುಕಿಗೂ ಒರ ಬದುಕಿಗೂ ವ್ಯತ್ಯಾಸವಿರುದು ಗೋಚರವಾಗುತ್ತದೆ. ಅಂತಹ ವ್ಯಕ್ತಿ ಸಮಾಜಕ್ಕೆ ಏನು ಸಂದೇಶ ಕೊಡಲು ಸಾಧ್ಯವಿದೆ ಎಂಬುದನ್ನು ಈ ಸೇತುಬಂಧದ ಮೂಲಕ ಶ್ರೀ ವಿಠ್ಠಪ್ಪ ಗೋರಂಟ್ಲಿಯವರು ಪ್ರಶ್ನಿಸಿದ್ದಾರೆ.
ಈ ಕಲಿಯುಗದಲ್ಲಿ ಹೊಟ್ಟೆಕಿಚ್ಚಿನ ಸ್ವಭಾವದವರೇ ಹೆಚ್ಚಿದ್ದಾರೆ. “ಹಗಲು ರಾತ್ರಿಯನ್ನದೆ ಒಂದೇ ಸವನೆ ಸುಡುತ್ತಿರುವ ಈ ಕಿಚ್ಚನ್ನು ಒಡಲಲ್ಲಿಟ್ಟವರಾರು?”, “ಈ ಬೆಂಕಿಗೆ ನನ್ನನ್ನು ದೂಡಿ ನಲಿವ ಕೈಗಳೆಲ್ಲಿವೆ?”, “ಹುಲ್ಲುಹಾಕಿ ಬೆಂಕಿಕಾಯಿಸಿಕೊಳ್ಳಲು ಹೀಗೆ ಹುನ್ನಾರು ಮಾಡಿದರೇ?, ನನ್ನವರೇ ನನಗೆದುರಾಗಿ ಬೆಂಕಿಯಿಟ್ಟು ದೂರಾದರೆ?” ಎಂಬ ಶ್ರೀ ವಿಠ್ಠಪ್ಪ ಗೋರಂಟ್ಲಿಯವರು; ‘ಸೇತುಬಂಧ’ ಕಟ್ಟಬೇಕೆನ್ನುವ ಅವರ ಆಶಾಭಾವನೆಗಳು ಫಲಕೊಡಲು ಸಾಧ್ಯವೇ ಎಂಬ ಪ್ರಶ್ನೆ ಮೂಡುವುದು ಸಹಜ. “ಅವರು ಮೇಲೆತ್ತಿದರು ನಿಜ, ಇನ್ಯಾರೋ ಅದಕ್ಕಿಂತಲೂ ಮೇಲೆತ್ತಿದರು, ಇದನ್ನು ಸಹಿಸದ ಅವರು ಕಾಲೆಳೆಯಲು ಜಗ್ಗಾಡಿದರು” ಎನ್ನುತ್ತಾ ಪ್ರಸ್ತುತ ಹೊಟ್ಟೆಕಿಚ್ಚಿನ ಸಮಾಜವನ್ನು ದೂಷಿಸಿದ್ದಾರೆ. “ಹೀಗೆ ನನ್ನ ಬೇರಿನ ಸತ್ವಹೀರಿ ಬೆಳೆದ ಚಿಗುರನಾರು ಚಿವುಟಿದರು? ಚಿಗುರು ಪ್ರಫುಲ್ಲಿತವಾಗಿ ಫಲಭರಿತವಾಗುವ ಮೊದಲು” ಎಂದು ವಾಸ್ತವದ ಮತ್ಸರದ ಸಮಾಜವನ್ನು ತೋರಿದ್ದಾರೆ. ಇಂತಹ ಹೊಟ್ಟೆಕಿಚ್ಚಿನ ಮತ್ಸರವುಳ್ಳ ಸಮಾಜದಲ್ಲಿ ‘ಸೇತುಬಂಧ’ದ ಕಲ್ಪನೆಗಳು ಫಲಕೊಡಲು ಸಾಧ್ಯವೇ?.


ಶ್ರೀ ವಿಠ್ಠಪ್ಪ ಗೋರಂಟ್ಲಿಯವರು ರೈತರ ಪರ ಅನೇಕ ಹೋರಾಟಗಳನ್ನು ಮಾಡಿದ್ದಾರೆ. ರೈತ ಮತ್ತು ಕಾರ್ಮಿಕ ವರ್ಗದವರಿಗೆ ಯಾವುದೇ ಸಮಸ್ಸೆಗಳಿದ್ದರೂ ಅದರ ವಿರುದ್ಧದ ಚಳುವಳಿಯಲ್ಲಿ ಮುಂಚೂಣಿಯಲ್ಲಿದ್ದವರು. ಅವರ ಸಮಸ್ಸೆಗಳನ್ನು ಸಾಹಿತ್ಯದಲ್ಲಿಯೂ ಹೇಳದೆ ಬಿಟ್ಟಿಲ್ಲಾ. “ಹಸಿರು ಬೆಳೆದು ಸರ್ವ ಜೀವಿಗಳಿಗೆ ಉಸಿರು ಉಳಿಸಿ ಕಾಪಾಡಿದವ, ಉಸಿರುಳಿಸಿಕೊಳ್ಳಲಾರದ ಪರಿಸ್ಥಿತಿಗೆ ತಲುಪಿದ ಪರಿಯನೆಂತು ಹೇಳುವುದು” ಎಂಬ ನೋವನ್ನು ಈ ಕೃತಿಯಲ್ಲಿ ತೋಡಿಕೊಂಡಿದ್ದಾರೆ. “ಕಾರ್ಖಾನೆಯಗಳ ಕರ್ಕಶದಲ್ಲಿ ಕಳೆದ ಉಸಿರು, ಭಾವನೆಗಳ ಸಂಹಿಸಲು ಶಕ್ತಿ ಸಾಲುತ್ತಿಲ್ಲ ಶಬ್ಧಕ್ಕೆ, ನೋವಿನ ಮೂರ್ತವಾಗಲು ಕವನ ಸೋತು ಜಾರಿದೆ ಸ್ತಬ್ದಕ್ಕೆ, ರೆಕ್ಕೆ ಪುಕ್ಕ ಕಿತ್ತ ಹಕ್ಕಿ ಹಾರುವುದೆಂತು ನಭಕ್ಕೆ” ಎಂಬಂತಾಗಿದೆ ರೈತ-ಕಾರ್ಮಿಕರ ಬದುಕು. ಅದನ್ನು ಸರಕಾರಗಳು ಅರ್ಥೈಸಿಕೊಳ್ಳಬೇಕಿದೆ. ಅದು ಆಗಾಗದಿದ್ದಾಗ ಶ್ರೀ ವಿಠ್ಠಪ್ಪ ಗೋರಂಟ್ಲಿಯವರಂತಹ ಪ್ರಗತಿಪರ ಹೋರಾಟಗಾರರು ಚಳುವಳಿ ಮಾಡುತ್ತಿರುವುದಂತೂ ಸತ್ಯ. “ಕಗ್ಗತ್ತಲ ಗವಿಯಾಗ ಬದುಕುವಂಥ ನನ್ನ ಜನಾ, ಒಡೆದ ಮನಾ ನೋವು ಘನಾ ಅನುಭವಿಸಿ ದಿನಾ ದಿನಾ ಹೇಳದಂಥ ವೇದನಾ”ವನ್ನು ಇಂತಹ ಕೃತಿಗಳ ಮೂಲಕ ಹೇಳುವಲ್ಲಿ ಯಶಸ್ವಿಯಾಗಿದ್ದಾರೆ.


ಬುದ್ಧ, ಬಸವ, ಅಂಬೇಡ್ಕರ್ ಮೊದಲದವರು ಸಮಸಮಾಜದ ಪರಿಕಲ್ಪನೆಯ ಬೆಳಕನ್ನು ಹಚ್ಚಿಹೋದವರು. ಅವರ ಬೆಳಕಿನಲ್ಲೇ ಇಂದು ಲೋಕ ಬೆಳಗುತ್ತಿದೆ ಎಂದರೆ ತಪ್ಪಾಗಲಾರದು. ಈ ಸಮಾಜಕ್ಕೆ ಕೊಟ್ಟುಹೋದ ಅವರ ನುಡಿಮುತ್ತುಗಳು ಸರ್ವಕಾಲಿಕವೂ ಸತ್ಯವಾದವುಗಳು. ಇಂತಹ ಮಹಾತ್ಮರ ನುಡಿಗಳ ನೆನಕೆಗಳು, ಮತ್ತವರ ಸ್ಮರಣೆಗಳು ಸದಾಕಾಲವೂ ಇದ್ದಾಗ ಮಾತ್ರ ಸಮಸಮಾಜ ಕಟ್ಟಬಹುದು. “ಬೆಂದವರ ಬಾಳಿಗೆ ಬೆಳಕು ತಂದ ಬಸವ, ಬಸವಳಿದವರ ಬದುಕಿಗೆ ಹೊಸ ಕಳೆ ತಂದ ಬಸವ, ಕತ್ತಲೆಯ ಗರ್ಭ ಸೀಳಿ ಎದ್ದನಿವ ಸಿದ್ಧ, ಕಿತ್ತಿ ಹಾಕಿದ ಅಂಬೇಡ್ಕರ ಅಸ್ಪೃಶ್ಯತೆಯ ಕಸವ, ಸಾರಿದರು ವಿಶ್ವ ಮಾನವತೆಯ ಧರ್ಮ”ವನ್ನು. ಇಂತಹ ಧರರ್ಮದ ಬೆಳಕನ್ನು ಸಾರಿದವರು ಇಂದು ಕಾಲಗರ್ಭದೊಳಗೆ ಕಳೆದುಹೋಗಿದ್ದಾರೆ. ಅವರನ್ನು, ಮತ್ತವರ ತತ್ವಗಳನ್ನು ಹುಡುಕುವಂತಾಗಿದೆ. “ಅಂದಿದ್ದು; ಇಂದಿರುವ; ಮುಂದೆಂದಿಗೂ ಇರುವ, ಅಲ್ಲಿರುವ ಇಲ್ಲಿರುವ ಎಲ್ಲೆಲ್ಲಿಯೂ ಇರುವ ಈ ಮಹಾವೀರನ ನೀವು ಕಂಡಿರಾ? ನೀವು ಕಂಡಿರಾ?” ಎನ್ನುತ್ತಾ ಹುಡುಕುವಂತಾಗಿದೆ ಎಂಬ ಸತ್ಯವನ್ನು ಗೋರಂಟ್ಲಿಯವರು ಹುಡುಕಿದಂತಿದೆ.
“ಕಾಲ ನನ್ನೆಲ್ಲ ಅಂಗಾಂಗದ ಮೇಲೆ ಕಾಲಿಟ್ಟು ತೊತ್ತಳದುಳಿದಿದ್ದಾನೆ, ಹೆಜ್ಜೆಯ ಗುರುತುಳಿಸಿದ್ದಾನೆ, ಮುಂದೆ ಮೃತ್ಯು ಬರುವ ಸೂಚನೆಯನ್ನು ಕೊಟ್ಟಿದ್ದಾನೆ” ಎನ್ನುವ ಮಾತುಗಳನ್ನೊಮ್ಮೆ ‘ಕಾಲ’ ಎಂಬ ಹನಿಗವನದಲ್ಲೊಮ್ಮೆ ನೋಡಿದಾಗ ಸಾವಿನ ಅರಿವು ಅವರಿಗಿತ್ತೇನೋ ಎಂಬ ನೋವು ಕಾಡದೇ ಇರದು.
ಹೀಗೆ ಶ್ರೀ ವಿಠ್ಠಪ್ಪ ಗೋರಂಟ್ಲಿಯವರ ‘ಸೇತುಬಂಧ’ವು ತೆರೆದುಕೊಳ್ಳುತ್ತಾ ಹೋಗುತ್ತದೆ. ತನ್ನನ್ನು ತನಗೇ ಪರಿಚಯಿಸುತ್ತದೆ, ಮರೆಯಲಾಗದ ನೂರು ಕಥೆಗಳನ್ನು ಹೇಳುತ್ತದೆ, ಉತ್ತರವಿಲ್ಲದ ಒಂದರೆಡು ಪ್ರಶ್ನೆಗಳನ್ನು ಕೇಳುತ್ತದೆ, ಕಿಂಡಿಯಲ್ಲಿ ಕನಕನನ್ನು ತೋರುತ್ತಾ; ಕವಿಸತ್ತರೂ ಕವಿತೆ ಉಳಿಯುವಂತೆ ಹೇಳುತ್ತದೆ, ರೈತರ ಬಾಳನ್ನು ಅನಾವರಣ ಮಾಡುತ್ತದೆ, ಬೆಳಕಿಗಾಗಿ ಮೌನ ಮಾತಾಗುತ್ತದೆ. ಹೀಗೆ ‘ಸೇತುಬಂಧ’ ಸಂಕಲನವು ಎಲ್ಲವನ್ನೂ ಬೆಸೆಯುತ್ತಾ ಹೋಗುತ್ತದೆ. ಆದರೆ ಅದರ ಕರ್ತೃ ಕವಿ ಶ್ರೀ ವಿಠ್ಠಪ್ಪ ಗೋರಂಟ್ಲಿಯವರು ಮಾತ್ರ ಇಲ್ಲ ಎನ್ನುವ ಕೊರಗಿದೆ.

=25

follow me

Leave a Reply

Your email address will not be published.

error: Content is protected !!
×