ಬಂಧಿಗಳು!….

ಯಾರು ನೀವು?! ನಾನೇ? ಹೌದು…………
ನಾನು ಯಾರೆಂದು ಒಂದೇ ಮಾತಿನಲ್ಲಿ ಹೇಳುವುದಾದರೆ, ನಾನೂ ನಿನ್ನ ಹಾಗೆ ಒಬ್ಬ ಬಂಧಿ!. ಹೌದು ಈ ಲಂಕೆಯಲ್ಲಿ ನಾನೂ ಬಂಧಿಯಾಗಿರುವೆ. ಹೌದೇ?! ಆ ದುಷ್ಟ ರಾವಣ ನಿನ್ನನ್ನೂ ಬಂಧಿಯಾಗಿರಿಸಿರುವನೆ?! ಅವನು ಅಷ್ಟು ಜನ ಸ್ತ್ರೀಯರನ್ನು ಬಂಧಿಯಾಗಿರಿಸಿರುವನೇ? ಹೌದು ಅವನು ಎಷ್ಟೋ ಜನ ಸ್ತ್ರೀಯರನ್ನು ಬಂಧಿಸಿ ಮತ್ತೆ ಬಿಟ್ಟಿರುವನು; ಮತ್ತೆ ನಿನ್ನನ್ನೇಕೆ ಅವನು ಬಿಟ್ಟಿರುವುದಿಲ್ಲಾ? ಅದು ಸಾಧ್ಯವಿಲ್ಲ ಸೀತೆ. ನನ್ನನ್ನು ಹಾಗೆ ಬಿಡಲು ಸಾಧ್ಯವಿಲ್ಲ. ನಾನೂ ಕೂಡ ಅವನನ್ನು ಬಿಟ್ಟು ಹೋಗಲು ಸಾಧ್ಯವೂ ಇಲ್ಲ. ನನ್ನ ಜೀವಮಾನ ಪೂರ್ತಿಯಾಗಿ ಅವನ ಬಂಧಿಯಲ್ಲಿಯೇ ಇರಬೇಕು. ಅವನು ಬಿಟ್ಟರೂ ನಾನು ಈ ದುಷ್ಟ ಲಂಕೆಯಿAದ ಹೊರ ಹೋಗಲು ಸಾಧ್ಯವಿಲ್ಲ ಸೀತೆ. ಅದು ಹೀಗಾಗಲು ಹೇಗೆ ಸಾಧ್ಯ?! ಏಕೆಂದರೆ ನಾನು ವಿಧಿವತ್ತಾಗಿ ಸಪ್ತಪದಿ ತುಳಿದು ಆ ರಾವಣನ ಜೊತೆ ವಿವಾಹವಾಗಿ ಈ ಲಂಕೆಗೆ ಬಂದಿರುವೆ. ಅವನ ಮಡದಿಯಾಗಿ ಇಲ್ಲಿ ಬಂಧಿಯಾಗಿರುವೆ ಸೀತೆ.
ಅಂದರೆ……?!
ಹೌದು ನಾನು ನತದೃಷ್ಟೆ; ಆ ರಾವಣನ ಮಡದಿ ಮಂಡೋದರಿ. ಇದು ನಿಜವೇ? ಹೌದೇ? ಆ ದುಷ್ಟ ರಾವಣನೊಂದಿಗೆ ನಿನ್ನ ಜೀವನವೇ? ಇಲ್ಲಾ ನನ್ನ ಜೀವನ ಅವನೊಂದಿಗಲ್ಲಾ; ನನ್ನ ಭಾವನೆಗಳೊಂದಿಗೆ ನನ್ನ ಜೀವನ. ಎಂದೋ ನನ್ನ ಜೀವನ ಅಂತ್ಯವಾಗಿದೆ ಸೀತೆ.

ಆ ರಾವಣನ ಪೈಶಾಚಿಕ ಕೃತ್ಯಗಳಿಂದ ಮನನೊಂದು ಎಂದೋ ನನ್ನ ಜೀವನ ಅಂತ್ಯ ಮಾಡಿಕೊಂಡಿದ್ದೇನೆ. ನನ್ನನ್ನೇ ನಾನು ಹತ್ಯ ಮಾಡಿಕೊಂಡಿದ್ದೇನೆ. ಇಂದು ನನ್ನ ದೇಹ ಮಾತ್ರ ಜೀವಂತವಿದೆ; ಅದು ಎಲ್ಲಿಯವರೆಗೋ ನಾ ತಿಳಿದಿಲ್ಲಾ. ಈ ಲಂಕೆಯಲ್ಲಿ ನಾನು ಪ್ರತಿಕ್ಷಣವೂ ನೋವನ್ನು ಅನುಭವಿಸಿರುವೆ ಸೀತೆ. ನಾನು ನೋವನ್ನು ಅನುಭವಿಸಲು ಈ ಲಂಕೆಗೆ ಬಂದಿರಬೇಕೇಂದು ಎಷ್ಟೋ ಸಲ ಅನಿಸಿದ್ದೂ ಉಂಟು. ಆ ನೋವನ್ನು ಯಾರ ಬಳಿಯೂ ವ್ಯಕ್ತಪಡಿಸಲಾಗದೆ ಅಸಾಹಯಕಳಾಗಿ ಮೂಕ ರೋಧನೆ ಅನುಭವಿಸುತ್ತಿದ್ದೇನೆ. ನಿನ್ನನ್ನು ಅಪಹರಿಸಿಕೊಂಡು ತಂದು ಇಲ್ಲಿ ಬಂಧಿಯಾಗಿ ಇಟ್ಟಿದ್ದರೆ; ನನ್ನನ್ನು ವಿಧಿವತ್ತಾಗಿ ಮದುವೆಯಾಗಿ ತಂದು ಇಲ್ಲಿ ಬಂಧಿಯಾಗಿ ಇಟ್ಟಿರುವನು. ಇಷ್ಟೇ ನಮ್ಮಿಬ್ಬರಲ್ಲಿರುವ ವ್ಯತ್ಯಾಸ ಸೀತೆ.
*************
ಸುಲೋಚನಾ ಇದೇನು ಮಾಡಿರುವೆ? ಆ ಸೂರ್ಪನಕಿಯನ್ನು ಬಂಧನದಿಂದ ಏಕೆ ಕದ್ದು ಕರದೊಯ್ದಿರುವೆ? ಅದು ಲಂಕೇಶನ ಅನುಮತಿ ಇಲ್ಲದೆಯೇ. ಇದು ಘೋರ ಅಪರಾಧ ಎಂದು ನಿನಗೆ ತಿಳಿದಿಲ್ಲವೆ? ಇಲ್ಲಾ ಲಂಕಾಧೀಶಾ ನಾನು ಯಾವ ಅಪರಾಧವನ್ನೂ ಮಾಡಿಲ್ಲಾ. ಆಕೆಯನ್ನು ನಾನು ಬಂಧನದಿAದ ಮುಕ್ತಗೊಳಿಸಿರುವೆ ಅಷ್ಟೆ. ಸುಲೋಚನಾ ಇದು ರಾಜದ್ರೋಹ ಎಂದು ನಿನಗೆ ಗೊತ್ತಿಲ್ಲವೆ? ಇದಕ್ಕೆ ಎಂತಹ ಶಿಕ್ಷೆ ಎಂಬುದು ನಿನಗೆ ತಿಳಿದಿದೆ ತಾನೆ! ಇಂದ್ರನನ್ನೇ ಜಯಿಸಿದ ನನ್ನ ಮಗ ಇಂದ್ರಜೀತನ ಮಡದಿಯಾಗಿ, ತ್ರಿಲೋಕದ ಅಧಿಪತಿಯಾದ ಲಂಕಾಧೀಶನ ಸೊಸೆಯಾಗಿ ಇಂತಹ ಅಪರಾಧ ಮಾಡುವುದು ಎಷ್ಟು ಸರಿ? ರಾವಣನ ಸೊಸೆಯಾಗಿ ಈ ರೀತಿಯಾಗಿ ವರ್ತಿಸುವುದು ಸರಿಯೇ ಸುಲೋಚನಾ? ನೀನು ಶಿಕ್ಷೆ ಅನುಭವಿಸಲೇಬೇಕು ಸುಲೋಚನಾ. ನನ್ನದು ಅಪರಾಧವೇ ಲಂಕಾಧೀಶಾ? ಹೌದು ನೀನು ಅಪರಾಧಿಯಾಗಿರುವೆ.

ಮತ್ತೆ ಏನೂ ಅಪರಾಧ ಮಾಡದ ಸೀತೆಯನ್ನು ಕದ್ದು ಅಪಹರಣ ಮಾಡಿ ತಂದಿಟ್ಟಿರುವುದು ಅಪರಾಧವಲ್ಲವೇ? ಇದ್ಯಾವ ರಾಜನೀತಿ ಲಂಕಾಧೀಶ? ನೀವು ನಿಮ್ಮ ಸಹೋದರಿ ಸೂರ್ಪನಕಿಗಾದ ಅವಮಾನಕ್ಕಾಗಿ ಸೀತೆಯನ್ನು ಅಪಹರಿಸಿದ್ದೀರಿ ಅಲ್ಲವೇ? ನಿನ್ನ ಸಹೋದರಿ ಸೂರ್ಪನಕಿಯನ್ನು ಮತ್ತೇಕೆ ಬಂಧಿಸಿದ್ದೀರಿ? ಅವಳ ಕೊಲೆಯ ಸಂಚನ್ನೇಕೆ ರೂಪಿಸಿದ್ದೀರಿ? ಇದ್ಯಾವ ನ್ಯಾಯ ಲಂಕಾಧಿಪತಿ? ನೀವೇ ಉತ್ತಿರಿಸಬೇಕು. ಸುಲೋಚನಾ ಮಾತಿನ ಮೇಲೆ ಹಿಡಿತವಿರಲಿ. ನಾನು ಸೀತೆಯನ್ನು ಅಪಹರಿಸಿ ತಂದಿರುವೆ ನಿಜ, ಅದು ನನ್ನ ಸಹೋದರಿ ಸೂರ್ಪನಕಿಗಾದ ಅವಮಾನದ ಪ್ರತಿಕಾರಕ್ಕಾಗಿ. ಇಂದು ಅದರ ಪ್ರಾಯಶ್ಚಿತವಾಗಿ ನಾನು ಆ ಸೀತೆಯನ್ನು ವಿವಾಹವಾಗಲು ಹೊರಟಿರುವೆ, ಇದು ನ್ಯಾಯವಲ್ಲವೇ? ಇದನ್ನೇ ಸೂರ್ಪನಕಿ ಪ್ರಶ್ನಿಸಿರುವುದು ಎಷ್ಟು ಸರಿ? ಅದಕ್ಕಾಗಿಯೇ ಅವಳಿಗೆ ಶಿಕ್ಷೆ ನೀಡಿರುವೆ; ಬಂಧನ ಶಿಕ್ಷೆಯನ್ನು ವಿಧಿಸಿರುವೆ. ಇದು ಲಂಕೆಯ ನಿಯಮ. ಲಂಕಾಧೀಶನ ನಿಯಮಗಳನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ. ಲಂಕಾಧಿಪತಿ ನಿಮಗೆ ಪ್ರತಿಕಾರ ತೀರಿಸಿಕೊಳ್ಳಬೇಕೆಂಬ ಹಠವಿದ್ದಿದ್ದರೆ ರಾಮ-ಲಕ್ಷö್ಮಣರ ಮೇಲೆ ನಿಮ್ಮ ಪ್ರತಿಕಾರವಿರಬೇಕಿತ್ತು. ಅದನ್ನು ಬಿಟ್ಟು ಅವರ ಸ್ತ್ರೀ ಅಬಲೆ ಸೀತೆಯನ್ನೇಕೆ ಅಪಹರಿಸಿದ್ದೀರಿ? ಅವಳ ಮೇಲೇಕೆ ನಿಮ್ಮ ಪ್ರತಿಕಾರ? ಇದೂ ಲಂಕೆಯ ನಿಯಮವೇ? ಸೂರ್ಪನಕಿಗೆ ಅವಮಾನ ಮಾಡಿದ ರಾಮ-ಲಕ್ಷ್ಮಣರನ್ನು ಯುದ್ಧಕ್ಕೆ ಆಮಂತ್ರಿಸಬಹುದಿತ್ತಲ್ಲವೆ? ತ್ರಿಲೋಕಾಧಿಪತಿ ಒಬ್ಬ ಸ್ತ್ರೀಯನ್ನು ಅಪಹರಿಸಿ ಕನಿಷ್ಠನಾಗಿ ಬಿಟ್ಟನೇ? ಸುಲೋಚನಾ ನಿನ್ನ ಮಾತಿನಿಂದ ನನಗೆ ಕಡುಕೋಪ ಉಂಟಾಗುತ್ತಿದೆ. ನಿನ್ನನ್ನು ಶಿಕ್ಷಿಸದೇ ಬಿಡುವುದಿಲ್ಲ.
ಇಂದ್ರಜೀತಾ……….
ಅಪ್ಪಾಜಿ ಮಹಾರಾಜ! ಲಂಕೆಯ ನಿಯಮವನ್ನು ಮೀರಿದ ಅಪರಾಧಿ ಸೂರ್ಪನಕಿಗೆ ಸಹಾಯ ಮಾಡಿ, ಅಪರಾಧ ಎಸಗಿದ ಸುಲೋಚನಳನ್ನು ಬಂಧಿಸಿ; ಅವಳನ್ನು ಕಾರಾಗೃಹಕ್ಕೆ ಕಳುಹಿಸಿ. ಆಗಲಿ ಪಿತಾಜಿ……..
*************
ಅನಾಹುತವಾಯಿತು ಮಹಾರಾಜ! ಏನಾಯಿತು ಸೇವಕಾ? ಮಹಾರಾಣಿ ಮಂಡೋದರಿ ಅಗ್ನಿ ಪ್ರವೇಶ ಮಾಡುತ್ತಿದ್ದಾರೆ. ನಿಲ್ಲು ಮಂಡೋದರಿ ಇದೇನು ಅನಾಹುತ ಮಾಡಿಕೊಳ್ಳುತ್ತಿರುವೆ? ಅಗ್ನಿಯಿಂದ ಹೊರಗೆ ಬಾ ಮಂಡೋದರಿ. ಹೀಗೇಕೆ ಹುಚ್ಚಾಟವನ್ನು ಮಾಡುತ್ತಿರುವೆ? ಇಲ್ಲಾ ಮಹಾರಾಜ ನಾನು ಹುಚ್ಚಾಟ ಮಾಡುತ್ತಿಲ್ಲ. ಪ್ರತಿಯಾಗಿ ನೀನೇ ಹುಚ್ಚಾಟವನ್ನು ಮೆರೆಯುತ್ತಿರುವೆ ತ್ರಿಲೋಕಾಧಿಪತಿ ಲಂಕಾಧೀಶ. ನಿನ್ನ ವರ್ತನೆಯಿಂದ ನಾನು ನೊಂದಿರುವೆ. ಪಾಪವನ್ನು ಮೆರೆಯುತ್ತಾ ಹೋದಿರಿ ನೀವು. ಎಷ್ಟೋ ಸ್ತ್ರೀಯರನ್ನು ಅತ್ಯಾಚಾರ ಮಾಡಿದ್ದೀರಿ. ಅದರ ಪ್ರತಿಫಲದಪಾಪ ನನ್ನ ದೇಹದಹನದೊಂದಿಗೆ ಅಂತ್ಯವಾಗಲಿ. ಇಂದು ಒಬ್ಬ ಸ್ತ್ರೀಯ ಭಸ್ಮದೊಂದಿಗೆ ಮುಂದೆ ಆಗಲಿರುವ ಅನಾಹುತವನ್ನು ತಪ್ಪಿಸುತ್ತಿರುವೆ. ಇನ್ನು ಮುಂದೆ ಸ್ತ್ರೀಯರ ಮೇಲಿನ ಅತ್ಯಾಚಾರವಾಗುವುದನ್ನು ತಪ್ಪಿಸುತ್ತಿರುವೆ ಲಂಕೇಶ. ಇದುವರೆಗೆ ನಿನ್ನ ಯಾವುದೇ ನಿರ್ಣಯವನ್ನು ನಾನು ವಿರೋಧಿಸಿಲ್ಲ. ಜೊತೆಗೆ ನಾನು ನನ್ನ ಪತಿವ್ರತ ಧರ್ಮವನ್ನೂ ಪಾಲಿಸಿದ್ದೇನೆ. ಇಂದು ನೀವು ನನ್ನ ಮಾತನ್ನು ಕೇಳಲೇಬೇಕು ಲಂಕಾಧೀಶ. ಈ ರೀತಿ ಅಗ್ನಿ ಪ್ರವೇಶ ಮಾಡಿ ನಿನ್ನನ್ನು ನಿಯಂತ್ರಿಸುವುದು ನನ್ನ ಮುಂದಿರುವ ಒಂದೇ ಆಯ್ಕೆ. ನೀನು ಸ್ತ್ರೀಯರ ಮೇಲೆ ಅತ್ಯಾಚಾರ ಮಾಡಿ, ಅವರ ಬದುಕನ್ನು ಅಂತ್ಯ ಮಾಡುವುದನ್ನು ನೋಡಿ ಸುಮ್ಮನಿರುವ ಬದಲು; ನಾನೇ ಅಂತ್ಯ ಮಾಡಿಕೊಳ್ಳುವುದೇ ಉತ್ತಮ. ಬೇಡ ಮಂಡೋದರಿ ಹೀಗೆ ಮಾಡದಿರು. ಹೀಗೆ ಮಾಡಿ ನನಗೆ ಕಳಂಕ ತರದಿರು. ಇಲ್ಲಾ ಲಂಕಾಧೀಶ ನಾನು ನಿನಗೆ ಕಳಂಕ ತರುತ್ತಿಲ್ಲ. ಬದಲಾಗಿ ನಿಮಗೆ ನೀವೇ ಕಳಂಕವನ್ನು ತಂದುಕೊAಡಿರುವೆ. ಏನೂ ಅಪರಾಧ ಮಾಡದ ಸೀತೆಯನ್ನು ಅಪಹರಣ ಮಾಡಿ ತಂದು ಇಲ್ಲಿಟ್ಟು ನಿನಗೆ ನೀವೇ ಕಳಂಕವನ್ನು ತಂದುಕೊಂಡಿರುವೆ. ತ್ರಿಲೋಕವನ್ನು ಜಯಿಸಿದ ತ್ರಿಲೋಕಾಧಿಪತಿ ಇದು ಮೂರು ಲೋಕಕ್ಕೆ ಮಾಡಿದ ಅಪಮಾನ. ಭವಿಷ್ಯ ಇರುವವರೆಗೂ ನೀನು ಕಳಂಕಿತನಾಗಿರುವೆ. ಇದನ್ನು ನೀನು ಹೊರಲೇಬೇಕು. ಅದನ್ನು ಕಳೆದುಕೊಳ್ಳುವ ಪ್ರಯತ್ನ ಮಾಡುವೆಯಾ ಲಂಕಾಧಿಪತಿ? ಹೇಳು ಮಂಡೋದರಿ ನಾನು ಏನು ಮಾಡಬೇಕು? ಆ ಸೀತೆಯನ್ನು ಮುಕ್ತಗೊಳಿಸುವೆಯಾ? ಅವಳನ್ನು ಅವಳ ಪತಿಗೆ ಒಪ್ಪಿಸುವೆಯಾ? ಆ ರಾಮನಲ್ಲಿ ಕ್ಷಮೆ ಕೇಳುವೆಯಾ? ಸಾಧ್ಯವಿಲ್ಲ! ಮಂಡೋದರಿ, ಇದು ನನ್ನ ಭವಿಷ್ಯದ ವರ್ತಮಾನದಲ್ಲಿ ಕಳಂಕಿತವಾಗಲಿದೆ. ಅದಕ್ಕಾಗಿ ನಾನು ಆ ಸೀತೆಯನ್ನು ಬಿಟ್ಟು ಬಿಡಲು ಸಾಧ್ಯವಿಲ್ಲ. ಅಗ್ನಿಯಿಂದ ಹೊರಗೆ ಬಾ ಮಂಡೋದರಿ. ಅನಾಹುತ ಮಾಡುವ ಮೊದಲೇ ಹೊರಗೆ ಬಾ. ಇಲ್ಲ ರಾವಣ ಅಗ್ನಿ ನನಗೆ ಅಂತಹ ಭಯಂಕರ ಯಾವುದೇ ಅನಾಹುತ ಮಾಡುವುದಿಲ್ಲ. ನಿನ್ನ ದುಷ್ಕೃತ್ಯಗಳಿಗಿಂತ ಈ ಅಗ್ನಿ ಏನೂ ಅನಾಹುತ ಮಾಡದು. ಸರಿ ಮಂಡೋದರಿ ಈಗ ನೀನು ಅಗ್ನಿಯಿಂದ ಹೊರಗೆ ಬರಲು ನಾನೇನು ಮಾಡಲಿ?, ನಿನ್ನ ಅನಾಹುತ ತಪ್ಪಿಸಲು ನಾನೇನು ಮಾಡಲಿ? ಸೀತೆಯನ್ನು ಬಿಟ್ಟಬಿಡಲು ಆಗದೇ ರಾವಣ? ಸಾಧ್ಯವಿಲ್ಲ ಮಂಡೋದರಿ. ನಿನಗಾಗಿ ನಿನ್ನ ಒಳಿತಿಗಾಗಿ ಬೇರೆ ಯೋಜನೆಯನನ್ನು ಮಾಡುತ್ತಿರುವೆ. ಮತ್ತೇನು ಮಾಡಲು ಯೋಚಿಸಿರುವೆ ರಾವಣಾಧೀಶ? ನನ್ನ ತಂಗಿಗೆ ಅಪಮಾನ ಮಾಡಿದ ಆ ರಾಮ-ಲಕ್ಷ್ಮಣರ ವಿರುದ್ಧ ಯುದ್ಧ ಮಾಡಲೇಬೇಕು. ಆ ಯುದ್ಧದಲ್ಲಿ ಅವರನ್ನು ನಾನು ಸೋಲಿಸಲೇಬೇಕು. ನನ್ನ ತಂಗಿಯ ಪ್ರತಿಕಾರವನ್ನು ತೀರಿಸಿಕೊಳ್ಳಬೇಕು. ಅವರನ್ನು ಯುದ್ಧದಲ್ಲಿ ಅವಮಾನಮಾಡಿ, ಆ ಸೀತೆಯನ್ನು ಮರಳಿಸುವೆ. ಅಲ್ಲಿಯವರೆಗೆ ಆಕೆಯನ್ನು ನಾನು ವಿವಾಹವಾಗುವುದಿಲ್ಲ. ಅಲ್ಲದೆ ಅಲ್ಲಿಯವರೆಗೂ ನಾನು ಅವಳ ಮೇಲೆ ಯಾವುದೇ ರೀತಿಯ ಬಲ ಪ್ರಯೋಗ ಮಾಡುವುದಿಲ್ಲ. ಅಗ್ನಿಯಿಂದ ಹೊರಗೆ ಬಾ ಮಂಡೋದರಿ.
****************
ಬೇಡಾ ಪುತ್ರ ಯುದ್ಧ ಬೇಡ. ಈಗಾಗಲೇ ಯುದ್ಧದಿಂದ ಅನೇಕ ಅನಾಹುತಗಳು ಸಂಭವಿಸಿವೆ. ನೀನು ನಿನ್ನ ಪುತ್ರರನ್ನು ಕಳೆದುಕೊಂಡಿರುವೆ. ಅಕ್ಷಯಕುಮಾರ, ಇಂದ್ರಜೀತ, ತಾರಣಿಯರನ್ನು ಕಳೆದುಕೊಂಡಿರುವೆ ನೀನು; ನಾನು ನನ್ನ ಪುತ್ರ ಕುಂಬಕರ್ಣನನ್ನು ಕಳೆದುಕೊಂಡಿದ್ದಲ್ಲದೆ ಮತ್ತೊಬ್ಬ ಪುತ್ರ ವಿಭೀಷಣನನ್ನೂ ದೂರ ಮಾಡಿಕೊಂಡಿರುವೆ. ಇನ್ನುಳಿದ ನಿನ್ನೊಬ್ಬನ್ನನ್ನಾದಾರೂ ಉಳಿಸಿಕೊಳ್ಳುವೆ. ಇದು ಯುದ್ಧ ಮುಂದುವರೆಸುವ ಸಂದರ್ಭವಲ್ಲ ಪುತ್ರ. ಸಾಕು ಮಾಡು ಯುದ್ಧದ ಉನ್ಮಾದವನ್ನು ಬಿಟ್ಟು ಬಿಡು ಪುತ್ರ. ರಾವಣ ನಿನ್ನನ್ನು ಲಂಕಾಧಿಪತಿಯನ್ನಾಗಿ ಮಾಡಿ ಮೂರು ಲೋಕದಲ್ಲಿಯೂ ನಿನ್ನಂತಹ ಶೂರ-ಧೀರರು ಮತ್ತೊಬ್ಬರು ಇಲ್ಲದಂತೆ ಮಾಡಿರುವೆ. ಆದರೆ ಅದು ಇಂತಹ ದುರಂತಕ್ಕೆ ಕಾರಣವಾಗುತ್ತದೆಂದು ನಾನು ಭಾವಿಸಿರಲಿಲ್ಲ ಲಂಕಾಧೀಶ. ಇಲ್ಲ ಮಾತೆ ನಾನು ಯಾವ ದುರಂತಕ್ಕೆ ಕಾರಣನಾಗಲಾರೆ. ನಾನು ಪ್ರತಿಕಾರವನ್ನು ತೀರಿಸಿಕೊಳ್ಳುತ್ತಿರುವೆ. ಬೇಡ ಪುತ್ರ ಆ ರಾಮನು ಅಷ್ಟು ಸುಲಭದವನಲ್ಲ ಅವನು ನಾರಾಯಣಿ ಸ್ವರೂಪನು. ಮಾತೆ ನನ್ನನ್ನು ನೀನು ಮೂರು ಲೋಕದ ಅಧಿಪತಿಯನ್ನಾಗಿ ಬೆಳೆಸಿರುವೆ. ನನ್ನನ್ನು ಸೋಲಿಸುವುದೂ ಅಷ್ಟು ಸುಲಭವಲ್ಲ ಇದು ನಿನಗೆ ಗೊತ್ತಿದೆ ತಾನೆ? ರಾವಣ ಅಂತಹ ಪರಿಸ್ಥಿತಿ ಇಂದಿಲ್ಲ. ಬೇಡ ಪುತ್ರ ಸೀತೆಯನ್ನು ಮುಕ್ತಗೊಳಿಸು, ನನ್ನ ಮಾತನ್ನೊಮ್ಮೆ ಕೇಳು ಪುತ್ರ. ಸಾಧ್ಯವಿಲ್ಲ ಮಾತೆ, ಈ ವಿಷಯದಲ್ಲಿ ನನ್ನನ್ನು ಕಟ್ಟಿಹಾಕಬೇಡ ಮಾತೆ. ಇಲ್ಲ ರಾವಣ ನಾನು ಈ ಯುದ್ಧ ನಡೆಯಲು ಬಿಡುವುದಿಲ್ಲ. ಮುಂದಾಗಲಿರುವ ಅನಾಹುತವನ್ನು ತಪ್ಪಿಸುತ್ತಿರುವೆ. ಮಾತೆ ನಿನ್ನ ವರ್ತನೆಯಿಂದ ನಾನು ಮುಜುಗರಕ್ಕೀಡಾಗುವೆ. ಭವಿಷ್ಯದಲ್ಲಿ ನಾನು ಅಪಮಾನಕ್ಕೀಡಾಗುವಂತೆ ಮಾಡುತ್ತಿರುವೆ. ಇಲ್ಲ ಪುತ್ರ ಸೀತೆಯನ್ನು ಅಪಹರಿಸಿ ನೀನು ಈಗಾಗಲೇ ಅಪಮಾನಕ್ಕೀಡಾಗಿರುವೆ. ಮುಂದಿನ ಭವಿಷ್ಯತ್ತಿನಲ್ಲಿ ನಿನ್ನನ್ನು ನೆನೆದು ಆಡಿನಗಾಡುತ್ತಾರೆ; ಮತ್ತಷ್ಟು ನಗಾಡುವಂತೆ ಮಾಡಬೇಡ ಲಂಕಾಧೀಶ. ಸೀತೆಯನ್ನು ಮುಕ್ತಗೊಳಿಸು. ಸಾಧ್ಯವಿಲ್ಲ ಮಾತೆ, ಈ ವಿಷಯದಲ್ಲಿ ನನ್ನನ್ನು ಒತ್ತಾಯ ಮಾಡುವವರನ್ನೂ ಬಿಡುವುದಿಲ್ಲ. ಸೇವಕರೆ ಈ ಮಾತೆಯನ್ನು ಗೃಹಬಂಧನದಲ್ಲಿರಿಸಿ. ಮಾತೆಯ ಸ್ಥಾನವನ್ನೂ ನಾನು ಮರೆತುಬಿಡುವೆ. ಪುತ್ರ ಸೀತೆಯಂತೆ ನನ್ನನ್ನೂ ಬಂಧಿಸುವೆಯಾ? ಸರಿ ಪುತ್ರ ಇಷ್ಟೆ ನನ್ನಿಂದ ಪ್ರಾರ್ಥಿಸಲು ಸಾಧ್ಯವಿದೆ, ಆ ದೇವರು ನಿನ್ನನ್ನು ಕಾಪಾಡಲಿ ಪುತ್ರ. ಮತ್ತೆ ಈ ಲಂಕೆಯನ್ನು ಉಳಿಸು.
*************
ಮಂಡೋದರಿ ನಾನು ಯುದ್ಧಕ್ಕೆ ಹೊರಡುತ್ತಿರುವೆ. ಆ ರಾಮ-ಲಕ್ಷ್ಮಣರನ್ನು ಯುದ್ಧದಲ್ಲಿ ಸೋಲಿಸಲು ಹೊರಟಿರುವೆ. ಶುಭಕೋರಲಾರೆಯಾ? ಏನೆಂದು ಹಾರೈಸಲಿ ಲಂಕಾಧೀಶಾ? ಏಕೆ ಅನುಮಾನವೇ? ನನ್ನ ಪ್ರರಾಕ್ರಮದ ಮೇಲೆ ನಿನಗೆ ನಂಬಿಕೆ ಇಲ್ಲವೇ? ಮೂರು ಲೋಕವನ್ನೇ ಜಯಿಸಿರುವೆ ನಾನು. ಮೂರು ಲೋಕದ ಅಧಿಪತಿಯ ಮೇಲೆ ನಿನಗೆ ಅಪನಂಬಿಕೆಯೇ? ಇಲ್ಲ ರಾವಣ ನಿನ್ನ ಮೇಲೆ ನನಗೆ ಅಪನಂಬಿಕೆ ಇಲ್ಲ. ಮೂರು ಲೋಕದ ಅಧಿಪತಿಯು ಒಬ್ಬ ಸ್ತ್ರೀಯನ್ನು ಮೋಸದಿಂದ ಅಪಹರಿಸಿ ತಂದಿರುವುದು ನಂಬಲಾಗುತ್ತಿಲ್ಲ, ಅದಕ್ಕಾಗಿಯೇ ಪುತ್ರರನ್ನು, ಮಹಾರಥಿಗಳನ್ನು, ಸಹೋದರರನ್ನು ಕಳೆದುಕೊಂಡಿರುವುದನ್ನು ನಂಬಲಾಗುತ್ತಿಲ್ಲ. ಇಷ್ಟಾದರೂ ನೀನು ಹಠ ಬಿಡದೇ ಯುದ್ಧಕ್ಕೆ ಹೊರಟಿರುವುದನ್ನು ನೋಡಿಯೂ ನಂಬಲಾಗುತ್ತಿಲ್ಲ ಲಂಕಾಧೀಶ.

ಮಂಡೋದರಿ ಆ ಎಲ್ಲಾ ಅನಾಹುತಗಳಿಗೆ ಇಂದು ತಕ್ಕ ಉತ್ತರ ಕೊಡಬೇಕೆಂದಿರುವೆ. ಅದರ ಪ್ರತಿಕಾರವನ್ನು ತೀರಿಸಿಕೊಳ್ಳಬೇಕಿದೆ. ನಂಬಿಕೆ ಇಲ್ಲದವರಿಂದ ಶುಭ ಹಾರೈಕೆಗಳು ನನಗೆ ಬೇಕಾಗಿರುವುದಿಲ್ಲ ನಾನು ಹೊರಡುವೆ.

ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್

ಕನ್ನಡ ಉಪನ್ಯಾಸಕರು
ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ,
ಕೊಪ್ಪಳ-೫೮೩೨೩೧
ಮೊ ಸಂ: ೯೪೪೮೫೭೦೩೪೦
Email:skotnekal@gmail.com

 

=26

follow me

Leave a Reply

Your email address will not be published.

error: Content is protected !!
×