ಕೊಲೆ ಆರೋಪಿ ಮದುವೆಗೆ ಹೋದ ಪೊಲೀಸರಿಗೆ ಶಿಕ್ಷೆ

Advertising

ಕೊಪ್ಪಳ: ಕೊಲೆ ಆರೋಪಿಯ ಮದುವೆಯಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಮೂವರು ಪೊಲೀಸ್ ಅಧಿಕಾರಿಗಳಿಗೆ ಕಡ್ಡಾಯ ರಜೆ ಶಿಕ್ಷೆ ನೀಡಲಾಗಿದೆ. ಕೊಪ್ಪಳ ಜಿಲ್ಲೆ ಗಂಗಾವತಿಯ ಡಿವೈಎಸ್​ಪಿ ರುದ್ರೇಶ್ ಉಜ್ಜನಕೊಪ್ಪ,ಗಂಗಾವತಿಯ ಸಿಪಿಐ ಉದಯರವಿ, ಕನಕಗಿರಿಯ ಪಿಎಸ್​ಐ ತಾರಾಬಾಯಿಗೆ ಕಡ್ಡಾಯ ರಜೆ ಶಿಕ್ಷೆ ನೀಡಿ ಎಸ್‌ಪಿ ಟಿ.ಶ್ರೀಧರ್ ಆದೇಶ ಹೊರಡಿಸಿದ್ದಾರೆ.
2015ರ ಜನವರಿ 11 ರಂದು ಯಲ್ಲಾಲಿಂಗನ ಹತ್ಯೆ ಪ್ರಕರಣದಲ್ಲಿ 9 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ಸದ್ಯ ಜಾಮೀನಿನ ಮೇಲೆ ಆರೋಪಿಗಳು ಹೊರಬಂದಿದ್ದಾರೆ. 2 ದಿನದ ಹಿಂದೆ ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ ಆರೋಪಿ ಮಹಾಂತೇಶ್ ನಾಯಕ್ ವಿವಾಹ ಜರುಗಿದ್ದು, ಈ ಮದುವೆಯಲ್ಲಿ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು. ಈ ವಿಷಯ ತಿಳಿಯುತ್ತಿದ್ದಂತೆ ಎಚ್ಛೇತ್ತುಕೊಂಡ ಅಧಿಕಾರಿಗಳು ಮೂವರಿಗೆ ಕಡ್ಡಾಯ ರಜೆ ಶಿಕ್ಷೆ ನೀಡಿದ್ದಾರೆ.

 

ಯಲ್ಲಾಲಿಂಗ ಪ್ರಕರಣ.
ಜನವರಿ 11, 2015ರಲ್ಲಿ ಕೊಪ್ಪಳ ರೈಲು ನಿಲ್ದಾಣದಲ್ಲಿ ವಿದ್ಯಾರ್ಥಿಯೊಬ್ಬನ ಶವ ಪತ್ತೆಯಾಗಿತ್ತು. ಮೊದಲು ಸಾಮಾನ್ಯವಾಗಿ ಯಾರೋ ಹುಡುಗ ರೇಲ್ವೆ ಹಳಿಗೆ ಬಿದ್ದು ಸಾವನ್ನಪ್ಪಿರಬಹುದು ಎಂದು ಪೊಲೀಸರು ಅನುಮಾನಿಸಿದ್ದರು. ನಂತರದ ದಿನಗಳಲ್ಲಿ ಇದು ಆತ್ಮಹತ್ಯೆಯಲ್ಲ, ಕೊಲೆ ಎಂಬ ಅನುಮಾನಗಳು ದಟ್ಟವಾಗಿದ್ದವು. ಇದೊಂದು ವ್ಯವಸ್ಥಿತ ಕೊಲೆ ಎನ್ನುವುದು ಬೆಳಕಿಗೆ ಬಂದ ನಂತರ ಪ್ರಕರಣದ ತನಿಖೆಯ ಹೊಣೆ ಗದಗ ರೈಲ್ವೆ ಪೊಲೀಸ್ ಠಾಣೆಯಿಂದ ಕೊಪ್ಪಳ ನಗರ ಠಾಣೆಗೆ ವರ್ಗಾವಣೆಯಾಯಿತು. ಯಲ್ಲಾಲಿಂಗನ ಮನೆಯವರೂ ಇದು ‌ಕೊಲೆ ಎಂದು ಅನುಮಾನಿಸಿದ್ದರು. ಕೊಲೆ ಪ್ರಕರಣದ ತನಿಖೆ ಚುರುಕಾದಂತೆ ಹಲವು ವಿಚಾರಗಳು ಬಯಲಾದವು.

ಯಲ್ಲಾಲಿಂಗ ಯಾರು..?

ಕೊಪ್ಪಳ ಜಿಲ್ಲೆ ಕನಕಗಿರಿ ತಾಲ್ಲೂಕಿನ ಕನಕಾಪುರ ನಿವಾಸಿ. ತಮ್ಮ ಗ್ರಾಮದ ಸಮಸ್ಯೆಯನ್ನು ಖಾಸಗಿ ವಾಹಿನಿ ಮುಂದೆ ಹೇಳಿದ್ದಕ್ಕೆ ಯಲ್ಲಾಲಿಂಗನ ಹತ್ಯೆ ಮಾಡಲಾಗಿತ್ತು. ಮಾಜಿ ಸಚಿವ ಶಿವರಾಜ್ ತಂಗಡಗಿ ಆಪ್ತ ಹನುಮೇಶ್ ನಾಯಕ ಮತ್ತು ಅವರ ಮಗ ಮಹಾಂತೇಶ ನಾಯಕ ಸೇರಿ 9 ಜನರ ಮೇಲೆ ಕೊಲೆ ಆರೋಪ ಕೇಳಿಬಂತು. ಕೊಪ್ಪಳ ರೈಲು ನಿಲ್ದಾಣದಲ್ಲಿ ಯಲ್ಲಾಲಿಂಗನ ಪ್ರಾಣ ಹೋಗಿತ್ತು. ಆ ಸಮಯದಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಶಿವರಾಜ ತಂಗಡಗಿ ಸಚಿವರಾಗಿದ್ದ ಸಂದರ್ಭದಲ್ಲಿ. ಜಿಲ್ಲೆಯಲ್ಲಿ ಹಲವು ಪ್ರತಿಭಟನೆಗಳಿಗೂ ಈ ಕೊಲೆ ಕಾರಣವಾಗಿತ್ತು.

=5

follow me

Leave a Reply

Your email address will not be published.

error: Content is protected !!
×