ಪತ್ರಕರ್ತರಿಗೇ ಮಾಹಿತಿಯ ಕೊರತೆ

– ಚಾಮರಾಜ ಸವಡಿ | ಕೊಪ್ಪಳ

ಕುತೂಹಲವೊಂದೇ ಅಲ್ಲ, ‍ಅಧ್ಯಯನವೂ ಪತ್ರಕರ್ತನಿಗೆ ಅವಶ್ಯ.

ತನ್ನ ಸುತ್ತಮುತ್ತ ನಡೆಯುತ್ತಿರುವ ಬೆಳವಣಿಗೆಗಳ ಮಾಹಿತಿಯನ್ನು ಪತ್ರಕರ್ತ ತಿಳಿದುಕೊಂಡಿರಬೇಕು. ಆಗ ಮಾತ್ರ ಆತನಿಂದ ವಸ್ತುನಿಷ್ಠ ವರದಿಗಳು ಹೊರಬರಲು ಸಾಧ್ಯ.

ಇದಕ್ಕೆ ಅಧ್ಯಯನ ಬೇಕು. ಜೊತೆಗೆ ಭಾಷಾಜ್ಞಾನದ ಅವಶ್ಯಕತೆಯೂ ಇದೆ.

ಏಕೆಂದರೆ, ಬಹುತೇಕ ಬೆಳವಣಿಗೆಗಳ ದಾಖಲೆಗಳು ಇಂಗ್ಲಿಷ್‌ನಲ್ಲಿರುತ್ತವೆ. ಆದರೆ, ನಮ್ಮ ಬಹುತೇಕ ಪತ್ರಕರ್ತರಿಗೆ ಇಂಗ್ಲಿಷ್‌ ಬರುವುದಿಲ್ಲ. ಕಲಿಯಲು ಅವರು ಮನಸ್ಸೂ ಮಾಡುವುದಿಲ್ಲ. ಒಂಚೂರು ಪ್ರಯತ್ನಪಟ್ಟರೆ ಸುಲಭವಾಗಿ ಕಲಿಯಲು ಸಾಧ್ಯವಿರುವ ಅವಶ್ಯಕ ಭಾಷೆಯನ್ನು ಕಲಿಯಲು ಅವರು ಮಸನ್ಸು ಮಾಡದ್ದರಿಂದ, ಪತ್ರಿಕೋದ್ಯಮ ತೀವ್ರ ಮಿತಿಗೆ ಒಳಪಡುವಂತಾಗಿದೆ.

ಇಂತಹ ಸಂದರ್ಭದಲ್ಲಿ ವಾರ್ತಾ ಇಲಾಖೆಯ ಪ್ರಕಟಣೆಗಳು, ಸಂಘ-ಸಂಸ್ಥೆಗಳ ಪ್ರೆಸ್‌ ನೋಟ್‌ಗಳಷ್ಟೇ ಸುದ್ದಿಗಳಾಗತೊಡಗುತ್ತವೆ. ಸುತ್ತಮುತ್ತಲಿನ ಚಿಲ್ಲರೆ ರಾಜಕೀಯ ದೊಡ್ಡ ಸುದ್ದಿಯಾಗುತ್ತವೆ. ತಾವು ಬರೆದಿದ್ದೇ ಸತ್ಯ ಎಂಬ ಭ್ರಮೆಯಲ್ಲಿ ಪತ್ರಕರ್ತರು ಸಿಲುಕಿಕೊಳ್ಳುತ್ತಾರೆ.

ಕೊಪ್ಪಳವಷ್ಟೇ ಅಲ್ಲ, ರಾಜ್ಯದ ಬಹುತೇಕ ಪತ್ರಿಕೆಗಳಲ್ಲಿ ಕಂಡುಬರುತ್ತಿರುವ ಸಮಸ್ಯೆ ಇದು.

ಕೊಪ್ಪಳದ ಉದಾಹರಣೆಯನ್ನೇ ನೀಡುವುದಾದರೆ, ಇಲ್ಲಿ ಸಾಕಷ್ಟು ದೊಡ್ಡದೊಡ್ಡ ಕಾರ್ಖಾನೆಗಳು ಹಾಗೂ ಸಂಸ್ಥೆಗಳು ಇವೆ. ಆದರೆ, ಅವುಗಳ ಕಾರ್ಯವಿಧಾನ, ಅವು ಮಾಡುತ್ತಿರುವ ಕೆಲಸಗಳ ಕುರಿತು ವರದಿಗಳು ಬಂದಿದ್ದು ಬಲು ಅಪರೂಪ. ಅದೇ ರೀತಿ ಸರಕಾರದ ಕಾರ್ಯವಿಧಾನ, ನೀತಿಗಳ ಕುರಿತ ಮಾಹಿತಿ ಹೊರಬರುವುದೂ ಅಷ್ಟೇ ಅಪರೂಪ.

ಪತ್ರಕರ್ತರ ಅಧ್ಯಯನ ಕೊರತೆಯೇ ಇದಕ್ಕೆ ಮುಖ್ಯ ಕಾರಣ. ಪತ್ರಕರ್ತರ ಈ ದೌರ್ಬಲ್ಯದಿಂದಾಗಿ, ನಮ್ಮ ಸುತ್ತಮುತ್ತಲಿನ ಬೆಳವಣಿಗೆಗಳು ನಮಗೆ ಗೊತ್ತಾಗುವುದೇ ಇಲ್ಲ.

ಮಾಧ್ಯಮ ವೃತ್ತಿಗೆ ಇದಕ್ಕಿಂತ ಮಾರಕವಾದುದು ಇನ್ನೊಂದಿಲ್ಲ.

=15

follow me

Leave a Reply

Your email address will not be published.

error: Content is protected !!
×